ಪರಿಸರ ಉಳಿವಿಗಾಗಿ ಗಾಂಧಿ ಚಿಂತನೆಗಳನ್ನು ಅಳವಡಿಸಿಕೊಳ್ಳಿ: ನಾಗೇಶ ಹೆಗಡೆ

ಬೆಂಗಳೂರು, ಅ.2: ಇತ್ತೀಚೆಗೆ ನಮ್ಮ ಪರಿಸರ ದೊಡ್ಡ ಸಂಕಟಕ್ಕೆ ಸಿಲುಕಿದೆ. ಇಡೀ ಪೃಥ್ವಿಯೇ ಪರಿಸರ ನಾಶದಿಂದ ನಾಶವಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಗಾಂಧೀಜಿಯವರಂತ ಆದರ್ಶ ವ್ಯಕ್ತಿಯ ಚಿಂತನೆಗಳನ್ನು ಅಳವಡಿಕೊಳ್ಳುವುದು ಅಗತ್ಯವಾಗಿದೆ. ಲೋಕಮನ್ನಣೆ ಗಳಿಸಿದ ಇಂತಹ ನಾಯಕರ ವಿಚಾರಗಳ ಅಗತ್ಯ ಪ್ರಸ್ತುತ ಲೋಕಕ್ಕಿದೆ ಎಂದು ಪರಿಸರ ಚಿಂತಕ ನಾಗೇಶ ಹೆಗಡೆ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಿದ್ದ ‘ಗಾಂಧಿ ಮತ್ತು ಸಮಕಾಲೀನ ಜಗತ್ತು’ ಎಂಬ ವಿಶೇಷ ಉಪನ್ಯಾಸದಲ್ಲಿ ಭಾಗವಹಿಸಿ, ಅವರು ಮಾತನಾಡಿದರು.
ನಾವು ಇಂದಿನ ಅಗತ್ಯಗಳಿಗೆ ಅನುಗುಣವಾಗಿ ಗಾಂಧೀ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು. ಅವರ ಗ್ರಾಮೋದಯ ಚಿಂತನೆಗಳಂತೆ ಪರಿಸರವನ್ನು ಕಾಪಾಡಬೇಕು. ಇದರಿಂದ ನಮ್ಮ ಗ್ರಾಮಗಳ, ನಮ್ಮ ಊರುಗಳ ಸ್ವಾತಂತ್ರ್ಯವನ್ನು ರಕ್ಷಣೆ ಮಾಡಬಹುದು. ಮನುಷ್ಯರಿಗೆ ಸ್ವಾತಂತ್ರ್ಯ ಕೊಡುವ ತಂತ್ರಜ್ಞಾನವನ್ನು ನಾವು ರೂಪಿಸಿಕೊಂಡರೆ ಮಾತ್ರ ಜಾಗತಿಕ ಮಾರುಕಟ್ಟೆಯ ಹಿಡಿತದಿಂದ ಬಿಡಿಸಿಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಆರ್.ಪಿ.ಮಂಜುನಾಥ್ ಅವರು ಗಾಂಧಿ ಪಾತ್ರಧಾರಿಯಾಗಿ ಗಾಂಧೀಜಿಯವರ ಆತ್ಮಚರಿತ್ರೆಯ ಕೆಲವು ಭಾಗಗಳನ್ನು ಮಂಡಿಸಿದರು. ಪ್ರದರ್ಶನ ಕಲಾ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು ಶಶಿಧರ್ ಭಾರಿಘಾಟ್ ಅವರ ‘ಈಸೂರು ದಂಗೆ’ ಬೀದಿ ನಾಟಕವನ್ನು ಪ್ರದರ್ಶಿಸಿದರು. ಇನ್ನು ಜೈನ್ ಕಾಲೇಜಿನ ವಿದ್ಯಾರ್ಥಿಗಳು ಗಾಂಧೀ-ಚಿಂತನೆಗಳನ್ನು ಮಂಡನೆ ಮಾಡಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್.ವೇಣುಗೋಪಾಲ್, ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ನಟರಾಜ್ ಹುಳಿಯಾರ್ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.







