ಧೈರ್ಯವಿದ್ದರೆ ಸಿದ್ದರಾಮಯ್ಯ ಮೈಸೂರಿನಲ್ಲಿ ಚುನಾವಣೆ ಎದುರಿಸಲಿ: ಸಂಸದ ಶ್ರೀನಿವಾಸ್ ಪ್ರಸಾದ್ ಸವಾಲು

ಚಾಮರಾಜನಗರ: ಸಿದ್ದರಾಮಯ್ಯಗೆ ಧೈರ್ಯ ಇದ್ದರೆ ಮೈಸೂರಿನಲ್ಲಿ ಚುನಾವಣೆ ಎದುರಿಸಲಿ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಬಿಹಿರಂಗವಾಗಿ ಸವಾಲು ಹಾಕಿದ್ದಾರೆ.
ಚಾಮರಾಜನಗರದಲ್ಲಿ ನಡೆದ ಬಿಜೆಪಿಗೆ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮುಖ್ಯಮಂತ್ರಿಯಾಗಿದ್ದವರು ಎರಡು ಕಡೆಯಿಂದ ಸ್ಪರ್ಧಿಸಿ ಮೈಸೂರಲ್ಲಿ ಸೋತು ಇನ್ನು ನಾನು ಬರೋದಿಲ್ಲ ಎಂದು ಕೈ ಮುಗಿದು ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಜಮೀರ್ ಹಿಂದೆ ಚಾಮರಾಜಪೇಟೆಗೆ ಹೋಗ್ತಾರೆ, ಈಗ ಬಾದಾಮಿಯಲ್ಲೂ ಅವರ ಗತಿ ಏನಾಗುತ್ತದೆ ಎಂದು ಗೊತ್ತಾಗಿದೆ ಅದಕ್ಕಾಗಿ ಈಗ ಅವರು ಅಲೆಮಾರಿಯ ಹಾಗೆ ಕ್ಷೇತ್ರವನ್ನು ಹುಡುಕುತ್ತಿದ್ದಾರೆ ಎಂದರು.
ಉತ್ತರ ಭಾರತದಲ್ಲಿ ರಾಷ್ಟ್ರೀಯ ಪಕ್ಷವನ್ನು ಸಂಘಟಿಸಲು ಸಾಧ್ಯವಾಗದೇ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಉತ್ತರ ಭಾರತದಿಂದ ಕರೆತಂದು ಕೇರಳದ ವೈನಾಡಲ್ಲಿ ಚುನಾವಣೆಗೆ ನಿಲ್ಲಿಸಿದ್ದಾರೆ. ಒಬ್ಬ ರಾಷ್ಟ್ರೀಯ ಪಕ್ಷದ ಅಧ್ಯಕ್ಷನ ಗತಿಯೇ ಹೀಗಾದರೆ ಸಾಮಾನ್ಯ ಕಾರ್ಯಕರ್ತರ ಗತಿ ಏನು ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಆರೆಸ್ಸೆಸ್ ಅನ್ನು ತಾಲಿಬಾನಿಗೆ ಹೋಲಿಸಿರುವುದು ಅಕ್ಷಮ್ಯ ಅಪರಾದ. ಸಿದ್ದರಾಮಯ್ಯ ತಮ್ಮ ಹೇಳಿಕೆಯನ್ನು ವಾಪಾಸ್ ಪಡೆದು, ತಪ್ಪು ಒಪ್ಪಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಯಾವುದೋ ಉದ್ವೇಗದಲ್ಲಿ, ಮಾತಿನ ಬರದಲ್ಲಿ ಹೇಳಿರುವುದು ಸರಿಯಲ್ಲ. ಅದನ್ನು ನಾನು ಖಂಡಿಸುತ್ತೇನೆ ಎಂದರು.
ತಾಲಿಬಾನಿಗಳದ್ದು ರಾಕ್ಷಸಿ ಕೃತ್ಯ, ಈ ಶತಮಾನದಲ್ಲೇ ಅಂತಹ ಕೃತ್ಯಗಳನ್ನು ನಾನು ನೋಡಿಲ್ಲ. ತಾಲಿಬಾನನ್ನು ಯಾರಿಗೂ ಹೋಲಿಸುವ ಹಾಗಿಲ್ಲ. ಅಂತಹದನ್ನು ಆರೆಸ್ಸೆಸ್ ಗೆ ಹೋಲಿಸುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.







