ನಾನು ಭಾರತದ ಕೋವಿಶೀಲ್ಡ್ ಲಸಿಕೆ ಪಡೆದಿದ್ದೇನೆ: ಯು ಎನ್ ಜಿ ಎ ಅಧ್ಯಕ್ಷ ಅಬ್ದುಲ್ಲಾ ಶಾಹಿದ್

photo: twitter.com/UN_PGA
ವಿಶ್ವಸಂಸ್ಥೆ,ಅ.2: ವಿಶ್ವದ ಇತರ ದೇಶಗಳ ಹೆಚ್ಚಿನ ಜನರಂತೆ ತಾನೂ ಭಾರತದಲ್ಲಿ ತಯಾರಾಗಿರುವ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ಗಳನ್ನು ಪಡೆದಿದ್ದೇನೆ ಎಂದು ವಿಶ್ವಸಂಸ್ಥೆ ಸಾಮಾನ್ಯಸಭೆ (ಯು ಎನ್ ಜಿ ಎ)ಯ 76ನೇ ಅಧಿವೇಶನದ ಅಧ್ಯಕ್ಷ ಅಬ್ದುಲ್ಲಾ ಶಾಹಿದ್ ಹೇಳಿದ್ದಾರೆ.
ಬ್ರಿಟಿಷ್-ಸ್ವೀಡಿಷ್ ಔಷಧಿ ತಯಾರಿಕೆ ಕಂಪನಿ ಆ್ಯಸ್ಟ್ರಾಝೆನೆಕಾ ಅಭಿವೃದ್ಧಿಗೊಳಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ಭಾರತದಲ್ಲಿ ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿದೆ.
ಶುಕ್ರವಾರ ತನ್ನ ಮೊದಲ ಸುದ್ದಿಗೋಷ್ಠಿಯಲ್ಲಿ ಯಾವುದೇ ಕೋವಿಡ್ ಲಸಿಕೆಯನ್ನು ಒಪ್ಪಿಕೊಳ್ಳಬೇಕೇ ಅಥವಾ ವಿಶ್ವ ಆರೋಗ್ಯ ಸಂಸ್ಥೆ ಅಥವಾ ಇನ್ಯಾವುದೇ ಸಂಸ್ಥೆ ಮಾನ್ಯತೆ ನೀಡಿರುವ ಲಸಿಕೆಯನ್ನೇ ಎಂಬ ಸುದ್ದಿಗಾರರ ಪ್ರಶ್ನೆಗೆ ಶಾಹಿದ್,‘ಲಸಿಕೆಗಳ ಕುರಿತು ಅತ್ಯಂತ ತಾಂತ್ರಿಕ ಪ್ರಶ್ನೆಯನ್ನು ಕೇಳಿದ್ದೀರಿ. ನಾನು ಭಾರತದ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ಗಳನ್ನು ಪಡೆದಿದ್ದೇನೆ. ಕೋವಿಶೀಲ್ಡ್ ಸ್ವೀಕಾರಾರ್ಹ ಅಥವಾ ಅಲ್ಲ ಎಂದು ಎಷ್ಟು ದೇಶಗಳು ಹೇಳುತ್ತವೆ ಎನ್ನುವುದು ನನಗೆ ಗೊತ್ತಿಲ್ಲ,ಆದರೆ ವಿಶ್ವದ ಹೆಚ್ಚಿನ ದೇಶಗಳು ಕೋವಿಶೀಲ್ಡ್ ಬಳಸುತ್ತಿವೆ ಎಂದು ನಾನು ಹೇಳಬಲ್ಲೆ ’ ಎಂದು ಹೇಳಿದರು.
‘ಕೋವಿಶೀಲ್ಡ್ ಪಡೆದು ನಾನು ಬದುಕಿದ್ದೇನೆ. ಆದರೆ ನಿಮ್ಮ ಪ್ರಶ್ನೆಗೆ ವೈದ್ಯಕೀಯ ಪರಿಣತರು ಉತ್ತರಿಸಬೇಕು,ನಾನಲ್ಲ ’ ಎಂದರು. ಭಾರತವು ಸುಮಾರು 100 ದೇಶಗಳಿಗೆ 6.60 ಕೋ. ಡೋಸ್ಗಳಷ್ಟು ಕೋವಿಶೀಲ್ಡ್ ಲಸಿಕೆಯನ್ನು ರಫ್ತು ಮಾಡಿದೆ. ಶಾಹಿದ್ ಅವರ ತವರು ದೇಶ ಮಾಲ್ದಿವ್ಸ್ ಭಾರತದಲ್ಲಿ ತಯಾರಾದ ಲಸಿಕೆಗಳನ್ನು ಪಡೆದಿದ್ದ ಮೊದಲ ದೇಶಗಳಲ್ಲೊಂದಾಗಿದೆ. ಭಾರತವು ಕಳೆದ ಜನವರಿಯಲ್ಲಿ ಅಲ್ಲಿಗೆ ಒಂದು ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಕಳುಹಿಸಿತ್ತು.





