ಯುವ ಸಮೂಹಕ್ಕೆ ಗಾಂಧಿ ತತ್ವಗಳು ತಲುಪಬೇಕು: ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ
‘500 ಅಡಿ ಉದ್ದದ ತಿರಂಗಾ ಯಾತ್ರೆ ಮೂಲಕ ಗಾಂಧೀಜಿಗೆ ಗೌರವ ಸಮರ್ಪಣೆ’

ಬೆಂಗಳೂರು, ಅ.2: ಗಾಂಧಿ ಜಯಂತಿ ಅಂಗವಾಗಿ ಶನಿವಾರ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ವತಿಯಿಂದ 500 ಅಡಿ ಉದ್ದದ ರಾಷ್ಟ್ರಧ್ವಜದ ಮೂಲಕ ಬೃಹತ್ ತಿರಂಗಾ ಯಾತ್ರೆ ಆಯೋಜಿಸಲಾಗಿತ್ತು.
ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ, ಕೆಪಿವೈಸಿಸಿ ಅಧ್ಯಕ್ಷ ಎಂ.ಎಸ್.ರಕ್ಷಾ ರಾಮಯ್ಯ ನೇತೃತ್ವದಲ್ಲಿ ನಗರದ ಕಮ್ಮನಹಳ್ಳಿಯ ಜ್ಯೋತಿ ಶಾಲೆಯಿಂದ ಸುಮಾರು ಒಂದು ಕಿಲೋಮೀಟರ್‍ಗೂ ಹೆಚ್ಚು ದೂರ ಶಿಸ್ತುಬದ್ಧವಾಗಿ ತಿರಂಗಾ ಯಾತ್ರೆ ಸಾಗಿತು. ತ್ರಿವರ್ಣ ಧ್ವಜ ಹೊತ್ತ ಯುವ ಕಾಂಗ್ರೆಸ್ ಕಾರ್ಯಕರ್ತರು ದೇಶ ಭಕ್ತಿ ಗೀತೆಯೊಂದಿಗೆ ಹೆಜ್ಜೆ ಹಾಕಿದರು.
ಜವಾಹರ್ ಬಾಲ್ ಮಂಚ್‍ನ ಕಾರ್ಯಕರ್ತರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಮಹಾತ್ಮಾಗಾಂಧೀಜಿ ಮತ್ತಿತರ ನಾಯಕರ ಪೋಷಾಕುತೊಟ್ಟ ಶಾಲಾ ವಿದ್ಯಾರ್ಥಿಗಳು ಯುವ ಕಾಂಗ್ರೆಸ್ ಕಾರ್ಯಕರ್ತರ ಜತೆ ಹೆಜ್ಜೆ ಹಾಕಿದರು.
ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿ ಅವರು ತ್ಯಾಗ ಬಲಿದಾನದ ಸಂಕೇತವಾಗಿದ್ದಾರೆ. ಕಾಂಗ್ರೆಸ್‍ನ ಹಲವು ನಾಯಕರು ದೇಶಕ್ಕೆ ಪ್ರಾಣಾರ್ಪಣೆ ಮಾಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಒಗ್ಗಟ್ಟಿನಿಂದ ಇರುವ ದೇಶವನ್ನು ವಿಭಜಿಸುವ ಪ್ರಯತ್ನ ಮಾಡುತ್ತಿವೆ. ಇಂತಹ ವಿಭಜಕ ಶಕ್ತಿಗಳಿಗೆ ಕಾಂಗ್ರೆಸ್ ಎಂದೆಂದಿಗೂ ಅವಕಾಶ ನೀಡುವುದಿಲ್ಲ ಎಂದರು.
ಕೋಮು ಶಕ್ತಿಗಳು ಅನಗತ್ಯ ವಿಚಾರಗಳ ಮೂಲಕ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದು, ಗಾಂಧಿ ಜಯಂತಿ ಸಂದರ್ಭದಲ್ಲಿ ಪರಿವಾರದವರ ಮನಸ್ಸಿನಲ್ಲಿರುವ ಕೋಮು ಎಂಬ ಕಲ್ಮಷವನ್ನು ತೊಡೆದು ಹಾಕುವ ಅಗತ್ಯವಿದೆ. ಯುವ ಕಾಂಗ್ರೆಸ್ ಶಾಂತಿಯ ಸಂದೇಶ ಸಾರಲು ಈ ಯಾತ್ರೆ ಹಮ್ಮಿಕೊಂಡಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೋರಾಟ ಮಾಡುವಾಗ ಹೆದರಬಾರದು ಎಂದು ಸೂಚನೆಯ ನೀಡಿದ್ದಾರೆ. ಇದೇ ತಳಹದಿ ಮೇಲೆ ದೇಶ ಕಟ್ಟುವ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ಕೆಪಿವೈಸಿಸಿ ಅಧ್ಯಕ್ಷ ಎಂ.ಎಸ್.ರಕ್ಷಾ ರಾಮಯ್ಯ ಮಾತನಾಡಿ, ಇಂದಿನ ಯುವ ಸಮೂಹಕ್ಕೆ ಮಹಾತ್ಮಾ ಗಾಂಧೀಜಿ ಅವರ ತತ್ವ, ಸಿದ್ಧಾಂತ, ಶಾಂತಿ–ಮಂತ್ರಗಳನ್ನು ತಲುಪಿಸುವ ಉದ್ದೇಶದಿಂದ ಈ ಯಾತ್ರೆ ಹಮ್ಮಿಕೊಂಡಿದ್ದೇವೆ. ಯುವ ಸಮೂಹ ಹೆಚ್ಚಿನ ಪ್ರಮಾಣದಲ್ಲಿ ಗಾಂಧೀಜಿ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ತಿರಂಗಾ ಯಾತ್ರೆಯಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್‍ನ ಜಂಟಿ ಕಾರ್ಯದರ್ಶಿ ಕೃಷ್ಣ ಅಲ್ಲಾವರು, ಕಾರ್ಯದರ್ಶಿ ಸುರಭಿ ದ್ವಿವೇದಿ ಮತ್ತಿತರರು ಉಪಸ್ಥಿತರಿದ್ದರು.







