ಗುಜರಾತ್ ರಿಯಲ್ ಎಸ್ಟೇಟ್ ಕಂಪೆನಿ ಮೇಲೆ ಐಟಿ ದಾಳಿ: 200 ಕೋಟಿ ರೂ. ಅಕ್ರಮ ವ್ಯವಹಾರ ಪತ್ತೆ

ಹೊಸದಿಲ್ಲಿ, ಸೆ.23: ಅಹ್ಮದಾಬಾದ್ ಮೂಲದ ರಿಯಲ್ ಎಸ್ಟೇಟ್ ಕಂಪೆನಿ ಹಾಗೂ ಅದರ ಜೊತೆ ನಂಟು ಹೊಂದಿರುವ ಬ್ರೋಕರ್ ಗಳ ಮೇಲೆ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿ, ಲೆಕ್ಕಪತ್ರ ರಹಿತವಾದ 500 ಕೋಟಿ ರೂ. ಮೊತ್ತದ ಹಣಕಾಸು ವಹಿವಾಟು ನಡೆದಿಸಿರುವುದನ್ನು ಪತ್ತೆಹಚ್ಚಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಶನಿವಾರ ತಿಳಿಸಿದೆ.
ರಿಯಲ್ ಎಸ್ಟೇಟ್ ಸಮೂಹಸಂಸ್ಥೆಗೆ ಸೇರಿದ 300 ಕೋಟಿ ರೂ. ಹಾಗೂ ಅದರ ಜೊತೆ ನಂಟು ಹೊಂದಿರುವ 200 ಕೋಟಿ ರೂ.ಗೂ ಅಧಿಕ ಮೊತ್ತದ ಆದಾಯವನ್ನು ಲೆಕ್ಕಪತ್ರದಲ್ಲಿ ದಾಖಲಿಸದೆ ಇರುವುದು ದಲ್ಲಾಳಿಗಳ ವಶದಲ್ಲಿರುವ ದಾಖಲೆಗಳ ಮೂಲಕ ತಿಳಿದುಬಂದಿದೆ ಎಂದು ಸಿಬಿಡಿಟಿ ತಿಳಿಸಿದೆ.
ಆದಾಯ ತೆರಿಗೆ ಇಲಾಖೆಯು ರಿಯಲ್ಎಸ್ಟೇಟ್ ಗ್ರೂಪ್ ಹಾಗೂ ದಲ್ಲಾಳಿಗಳಿಗೆ ಸೇರಿದ 22 ಆವರಣಗಳ ಮೇಲೆ ಸೆಪೆಂಬರ್ 28ರಂದು ದಾಳಿ ನಡೆಸಿದ್ದು, ತನಿಖೆ ಪ್ರಗತಿಯಲ್ಲಿದೆ ಎದು ಹೇಳಿಕೆ ತಿಳಿಸಿದೆ. 1 ಕೋಟಿ ರೂ. ವೌಲ್ಯದ ನಗದು ಹಾಗೂ 98 ಲಕ್ಷ ರೂ. ಮೌಲ್ಯದ ಚಿನ್ನಭರಣಗಳನ್ನು ಕಾರ್ಯಾಚರಣೆ ವೇಳೆ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಅಕ್ರಮ ದಾಖಲೆಪತ್ರಗಳು ಹಾಗೂ ಡಿಜಿಟಲ್ ಪುರಾವೆಗಳನ್ನು ರಿಯಲ್ ಎಸ್ಟೇಟ್ ಡೆವಲಪರ್ ಸಂಸ್ಥೆಯ ಆವರಣದಲ್ಲಿ ವಶಪಿಸಿಕೊಳ್ಳಲಾಗಿದ್ದು, ಅವುಗಳಲ್ಲಿ ಹಲವಾರು ವಿತ್ತೀಯ ವರ್ಷಗಳ ಆಚೆಗೂ ನಡೆದ ಅಕ್ರಮ ಹಣಕಾಸು ವ್ಯವಹಾರಗಳು ನಡೆದಿರುವ ಕುರಿತ ಪುರಾವೆಗಳು ಅವುಗಳಲ್ಲಿ ಒಳಗೊಂಡಿವೆ ಎಂದು ಹೇಳಿಕೆ ತಿಳಿಸಿದೆ.