ಪಾರಸ್, ಚಿರಾಗ್ ಬಣಗಳು ಸದ್ಯ ಎಲ್ಜೆಪಿ ಹೆಸರು,ಚಿಹ್ನೆ ಬಳಸುವಂತಿಲ್ಲ: ಚುನಾವಣಾ ಆಯೋಗ
ಹೊಸದಿಲ್ಲಿ,ಅ.2: ಕೇಂದ್ರ ಸಚಿವ ಪಶುಪತಿ ಕುಮಾರ್ ಪಾರಸ್ ಮತ್ತು ಲೋಕಸಭಾ ಸಂಸದ ಚಿರಾಗ್ ಪಾಸ್ವಾನ್ ಅವರ ನೇತೃತ್ವದ ಎಲ್ ಜೆಪಿ ಬಣಗಳು ಮುಂಬರುವ ಬಿಹಾರ ವಿಧಾನಸಭಾ ಉಪ ಚುನಾವಣೆಗಳಲ್ಲಿ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಬಳಸುವುದನ್ನು ನಿಷೇಧಿಸಿ ಚುನಾವಣಾ ಆಯೋಗವು ಶನಿವಾರ ಮಧ್ಯಂತರ ಆದೇಶವನ್ನು ಹೊರಡಿಸಿದೆ.
ಆದೇಶವು ಕುಶೇಶ್ವರ ಆಸ್ಥಾನ ಮತ್ತು ತಾರಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆಗಳ ಅವಧಿಯನ್ನು ಒಳಗೊಂಡಿದ್ದು,ಆಯೋಗವು ವಿವಾದವನ್ನು ಅಂತಿಮವಾಗಿ ಇತ್ಯರ್ಥಗೊಳಿಸುವವರೆಗೆ ಜಾರಿಯಲ್ಲಿರುತ್ತದೆ.
ಪಕ್ಷದ ಸ್ಥಾಪಕ ರಾಮ ವಿಲಾಸ ಪಾಸ್ವಾನ್ ಅವರ ನಿಧನದ ಬಳಿಕ ಎಲ್ಜೆಪಿ ಹೆಸರು ಮತ್ತು ಚಿಹ್ನೆಯ ಮೇಲೆ ಉಭಯ ಬಣಗಳು ಹಕ್ಕು ಕೋರಿಕೆಯನ್ನು ಮಂಡಿಸಿವೆ. ಆದರೆ ಉಪಚುನಾವಣೆಗಳಿಗೆ ನಾಮಪತ್ರಗಳನ್ನು ಸಲ್ಲಿಸಲು ಅ.8 ಕೊನೆಯ ದಿನಾಂಕವಾಗಿರುವುದರಿಂದ ವಿವಾದ ಇತ್ಯರ್ಥಕ್ಕೆ ಸಮಯ ಸಾಲದು ಎಂದು ಆಯೋಗವು ಆದೇಶದಲ್ಲಿ ತಿಳಿಸಿದೆ. ಸೆ.28ರಂದು ಚುನಾವಣೆಯನ್ನು ಪ್ರಕಟಿಸಲಾಗಿದ್ದು,ಅ.30ರಂದು ಮತದಾನ ನಡೆಯಲಿದೆ.
ಎರಡೂ ಬಣಗಳು ತಮ್ಮದೇ ಆದ ಹೆಸರುಗಳನ್ನು ಮತ್ತು ಲಭ್ಯವಿರುವ ಚಿಹ್ನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಅವು ಸೋಮವಾರ ಅಪರಾಹ್ನದೊಳಗೆ ತಮ್ಮ ಆಯ್ಕೆಗಳನ್ನು ಆಯೋಗಕ್ಕೆ ತಿಳಿಸಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ ಪಕ್ಷದ ಮೇಲೆ ತಮ್ಮ ಹಕ್ಕು ಸಾಧನೆಯನ್ನು ಬೆಂಬಲಿಸುವ ದಾಖಲೆಗಳನ್ನು ನ.5ರೊಳಗೆ ಸಲ್ಲಿಸುವಂತೆಯೂ ತಿಳಿಸಲಾಗಿದೆ.







