ಮಂಗಳೂರು ಸ್ಮಾರ್ಟ್‌ಸಿಟಿ ವತಿಯಿಂದ ‘ಆಜಾದಿ ಕಾ ಅಮೃತ ಮಹೋತ್ಸವ’ ಆಚರಣೆ
ರ್ಯಾಲಿ, ವಾಕಥಾನ್, ಚಿತ್ರಕಲಾ ಪ್ರದರ್ಶನ ಸಹಿತ ವಿವಿಧ ಕಾರ್ಯಕ್ರಮ

ಮಂಗಳೂರು, ಅ.3: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಮಂಗಳೂರು ಸ್ಮಾರ್ಟ್‌ಸಿಟಿ ವತಿಯಿಂದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ‘ಆಜಾದಿ ಕಾ ಅಮೃತ ಮಹೋತ್ಸವ’ ಆಚರಣೆ ರವಿವಾರ ನಗರದಲ್ಲಿ ಜರುಗಿತು. ಆಚರಣೆಯ ಪ್ರಯುಕ್ತ ರ್ಯಾಲಿ, ವಾಕಥಾನ್, ಚಿತ್ರಕಲಾ ಪ್ರದರ್ಶನ ಸಹಿತ ವಿವಿಧ ಕಾರ್ಯಕ್ರಮ ನಡೆಯಿತು.
ನಗರದ ಎ.ಬಿ.ಶೆಟ್ಟಿ ವೃತ್ತದಿಂದ ಆರಂಭಿಸಲಾದ ವಿಂಟೇಜ್ ಕಾರು, ಸ್ಕೂಟರ್-ಬೈಕ್, ಸೈಕಲ್ ರ್ಯಾಲಿ ಹಾಗೂ ವಾಕಥಾನ್‌ಗೆ ಮೇಯರ್ ಪ್ರೇಮಾನಂದ ಶೆಟ್ಟಿ ಮತ್ತು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಚಾಲನೆ ನೀಡಿದರು.
ರಾಜ್ಯ ಮೀನುಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ, ಪಾಲಿಕೆಯ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಂದೀಪ್ ಗರೋಡಿ, ಲೋಕೇಶ್ ಬೊಳ್ಳಾಜೆ, ಕ್ರಡೈ ಅಧ್ಯಕ್ಷ ಪುಷ್ಪರಾಜ್ ಜೈನ್, ಕಾರ್ಪೋರೇಟರ್ ಪೂರ್ಣಿಮಾ ಪಾಲ್ಗೊಂಡಿದ್ದರು.
*ಎ.ಬಿ. ಶೆಟ್ಟಿ ವೃತ್ತದ ಬಳಿಯಿಂದ ಆರಂಭವಾದ ರ್ಯಾಲಿಯು ಕ್ಲಾಕ್ ಟವರ್, ಹಂಪನಕಟ್ಟೆ ಸಿಗ್ನಲ್, ಅಂಬೇಡ್ಕರ್ ವೃತ್ತ, ಬಂಟ್ಸ್ ಹಾಸ್ಟೆಲ್, ಪಿವಿಎಸ್, ಎಂಜಿ ರಸ್ತೆಯಲ್ಲಿ ಬಳ್ಳಾಲ್‌ಬಾಗ್, ಲಾಲ್‌ಬಾಗ್, ಲೇಡಿಹಿಲ್ ವೃತ್ತದ ಮೂಲಕ ಮಂಗಳಾ ಕ್ರೀಡಾಂಗಣದಲ್ಲಿ ಸಮಾರೋಪಗೊಂಡಿತು.ಸಮಾರೋಪ ಕಾರ್ಯಕ್ರಮವನ್ನು ಶಾಸಕ ಡಿ.ವೇದವ್ಯಾಸ್ ಕಾಮತ್ ಉದ್ಘಾಟಿಸಿದರು. ಬಳಿಕ ಮಾತನಡಿದ ಅವರು ದೇಶದ ಹಲವು ಸ್ಮಾರ್ಟ್ ಸಿಟಿಗಳಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಮಂಗಳೂರಿನಲ್ಲೂ ಸಾರ್ವಜನಿಕರನ್ನು ಒಳಗೊಂಡಂತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಹುತಾತ್ಮರಾದ ಮಹನೀಯರ ಕುರಿತು ಮಾಹಿತಿ ಒದಗಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಮೇಯರ್ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಸುಮಂಗಳಾ ರಾವ್, ಮನಪಾ ಸದಸ್ಯ ಕಿರಣ್ ಕುಮಾರ್, ನಾಮನಿರ್ದೇಶನ ಸದಸ್ಯ ಭಾಸ್ಕರಚಂದ್ರ ಶೆಟ್ಟಿ, ಆಯುಕ್ತ ಅಕ್ಷಯ್ ಶ್ರೀಧರ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ ಉಪಸ್ಥಿತರಿದ್ದರು.ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿವಿಧ ಆಹ್ವಾನಿತ ತಂಡಗಳು ಈ ವೇಳೆ ಪ್ರದರ್ಶನ ನೀಡಿದವು. ಕಾರ್ಯಕ್ರಮದ ಪ್ರಯುಕ್ತ ಸ್ಟ್ರೀಟ್ ಫುಡ್ ಫೆಸ್ಟಿವಲ್, ಲಾಲ್‌ಬಾಗ್‌ನಿಂದ ಲೇಡಿಹಿಲ್‌ವರೆಗೆ ಚಿತ್ರ ಕಲಾ ಪ್ರದರ್ಶನ, ರಂಗೋಲಿ ಪ್ರದರ್ಶನ, ಮಕ್ಕಳಿಗೆ ಚಿತ್ರ ರಚನಾ ಸ್ಪರ್ಧೆಗಳು ಜರಗಿತು.
ಗಮನಸೆಳೆದ ವಿಂಟೇಜ್ ಕಾರು, ಚಿತ್ರಪ್ರದರ್ಶನ!
ಸೈಕ್ಲಿಂಗ್, ವಿಂಟೇಜ್ ಬೈಕ್/ಸ್ಕೂಟರ್, ವಿಂಟೇಜ್ ಕಾರು ರ್ಯಾಲಿಯ ಆಕರ್ಷಣೆ ಹೆಚ್ಚಿಸಿತು. ಮೇಯರ್ ಪ್ರೇಮಾನಂದ ಶೆಟ್ಟಿ ಜಿಲ್ಲಾಧಿಕಾರಿಗಳ ಜತೆಗೆ ವಿಂಟೇಜ್ ಕಾರು ಚಲಾಯಿಸಿದ್ದರು. ಅದಲ್ಲದೆ ಸ್ವಾತಂತ್ರ್ಯ ಹೋರಾಟಗಾರರನ್ನು ಬಿಂಬಿಸುವ ಪಾತ್ರಗಳು ಮೆರವಣಿಗೆಗೆ ಮೆರುಗು ನೀಡಿತು.
ಟ್ಯಾಬ್ಲೋ, ಹುಲಿವೇಷ, ಚೆಂಡೆ ಬಳಗ, ಬೊಂಬೆ ಬಳಗ, ನಾಸಿಕ್ ಬ್ಯಾಂಡ್ ತಂಡಗಳು, ವಾಕಥಾನ್‌ನ ವಿಶೇಷವಾಗಿತ್ತು. ಲೇಡಿಹಿಲ್ ರಸ್ತೆ ಬದಿಯಲ್ಲಿ ನಡೆದ ಚಿತ್ರಕಲಾ ಪ್ರದರ್ಶನ ಗಮನವೂ ಸೆಳೆಯಿತು. ಬೇರೆ ಬೇರೆ ಪ್ರದರ್ಶನ ಮಳಿಗೆಗಳಿಗೂ ಅವಕಾಶ ನೀಡಲಾಗಿತ್ತು.







.jpeg)


.jpeg)

.jpeg)

.jpeg)


.jpeg)

.jpeg)




.jpeg)



