ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಎಐಸಿಸಿ ಹಿರಿಯ ವೀಕ್ಷಕರಾಗಿ ನೇಮಕ

ಹೊಸದಿಲ್ಲಿ: ಛತ್ತೀಸ್‌ಗಡದಲ್ಲಿ ನಡೆಯುತ್ತಿರುವ ರಾಜಕೀಯ ಘರ್ಷಣೆಯ ನಡುವೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ಪಕ್ಷದ ರಾಜ್ಯ ಘಟಕದಲ್ಲಿ ನಾಲ್ವರು ಹೆಚ್ಚುವರಿ ಪದಾಧಿಕಾರಿಗಳನ್ನು ಪರಿಚಯಿಸಿದರು. ಸಾಂಸ್ಥಿಕ ಬದಲಾವಣೆಯ ಭಾಗವಾಗಿ ನಾಲ್ವರು ಉಪಾಧ್ಯಕ್ಷರು, ಮೂವರು ಪ್ರಧಾನ ಕಾರ್ಯದರ್ಶಿಗಳು ಹಾಗೂ ಸಂವಹನ ಮುಖ್ಯಸ್ಥರನ್ನು ಬದಲಿಸಿದರು.
ಮೂಲಗಳ ಪ್ರಕಾರ, 'ಓರ್ವ ನಾಯಕ, ಒಂದು ಹುದ್ದೆ' ಸೂತ್ರವನ್ನು ಅನುಸರಿಸಿ ಬದಲಾವಣೆಗಳನ್ನು ಮಾಡಲಾಗಿದೆ. ರಾಜ್ಯದಲ್ಲಿ ಇತ್ತೀಚೆಗೆ ರಚನೆಯಾದ ಮಂಡಳಿಗಳಲ್ಲಿ ಸದಸ್ಯರಾಗಿ ಅಥವಾ ಅಧ್ಯಕ್ಷರಾಗಿ ನೇಮಕಗೊಂಡ ಕಾರಣ ಈ ನಾಯಕರನ್ನು ಬದಲಾಯಿಸಲಾಯಿತು.
ಗಮನಾರ್ಹ ವಿಚಾರವೆಂದರೆ ಛತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಎಐಸಿಸಿ ಹಿರಿಯ ವೀಕ್ಷಕರಾಗಿ ನೇಮಿಸಲಾಯಿತು.
ಛತ್ತೀಸ್‌ಗಡದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಕಳೆದ ಕೆಲವು ವಾರಗಳಿಂದ ಊಹಾಪೋಹಗಳು ಹರಿದಾಡುತ್ತಿವೆ. ಈ ಊಹಾಪೋಹಗಳಿಂದಾಗಿ ರಾಜ್ಯದ ಹಲವು ಶಾಸಕರು ದಿಲ್ಲಿಯಲ್ಲಿ ಬೀಡುಬಿಟ್ಟಿದ್ದಾರೆ.
ಭೂಪೇಶ್ ಬಘೇಲ್ ನೇತೃತ್ವದ ಸರಕಾರವು ಜೂನ್ ನಲ್ಲಿ ಎರಡೂವರೆ ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಟಿ.ಎಸ್. ಸಿಂಗ್ ದೇವ್ ಅವರ ಬೆಂಬಲಿಗರು ಮುಖ್ಯಮಂತ್ರಿಯನ್ನು ಬದಲಾಯಿಸುವ ವಿಷಯವನ್ನು ಪ್ರಸ್ತಾಪಿಸಿದರು.
ಡಿಸೆಂಬರ್ 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಗೆದ್ದಿತು. ನಂತರ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಬಘೇಲ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಟಿ.ಎಸ್. ಸಿಂಗ್ ದೇವ್ ಚುನಾವಣೆಯಲ್ಲಿ ಪ್ರಣಾಳಿಕೆ ಸಮಿತಿಯ ಮುಖ್ಯಸ್ಥರಾಗಿದ್ದರು.







