ಲಕ್ಷದ್ವೀಪದ ಮುಸ್ಲಿಂ ಜನತೆಯ ದೇಶಭಕ್ತಿಯನ್ನು ಯಾರೂ ಅನುಮಾನಿಸಲು ಸಾಧ್ಯವಿಲ್ಲ: ರಾಜ್ ನಾಥ್ ಸಿಂಗ್

ಕವರಟ್ಟಿ: ಲಕ್ಷದ್ವೀಪದಲ್ಲಿನ ಮುಸ್ಲಿಂ ಜನತೆಯ ಅಥವಾ ದ್ವೀಪದ ಇತರ ನಿವಾಸಿಗಳು ದೇಶದ ವಿರುದ್ಧ ಜನರನ್ನು ಪ್ರಚೋದಿಸಲು ಒತ್ತಾಯಿಸಿದ ಭಾರತ ವಿರೋಧಿ ಪಡೆಗಳ ಪ್ರಯತ್ನಗಳನ್ನು ವಿಫಲಗೊಳಿಸಿರುವ ಕಾರಣ ಪ್ರಪಂಚದ ಯಾರೂ ಅವರ ದೇಶಭಕ್ತಿಯನ್ನು ಪ್ರಶ್ನಿಸುವ ಅಥವಾ ಅನುಮಾನಿಸುವ ಧೈರ್ಯವಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಹೇಳಿದ್ದಾರೆ.
"ಲಕ್ಷದ್ವೀಪದಲ್ಲಿರುವ ಮುಸ್ಲಿಂ ಜನತೆಯ ದೇಶಭಕ್ತಿಯನ್ನು ಸಂಶಯಿಸಲು ಭೂಮಿಯ ಮೇಲಿನ ಯಾರೂ ಧೈರ್ಯ ಮಾಡಲಾರರು. ಲಕ್ಷದ್ವೀಪದ ಜನರ ದೇಶಭಕ್ತಿಯ ಮೇಲೆ ಯಾರೂ ಪ್ರಶ್ನೆ ಮಾಡಲು ಸಾಧ್ಯವಿಲ್ಲ" ಎಂದು ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಸಿಂಗ್ ಹೇಳಿದರು.
ಮಹಾತ್ಮ ಗಾಂಧಿಯವರ 152 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಗಾಂಧಿ ಅವರ ಪ್ರತಿಮೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶನಿವಾರ ಲಕ್ಷದ್ವೀಪದಲ್ಲಿ ಅನಾವರಣಗೊಳಿಸಿದರು.
"ಮಹಾತ್ಮ ಗಾಂಧಿಯವರ ಜಯಂತಿಯಂದು ಅವರ ಪ್ರತಿಮೆಯನ್ನು ಕವರಟ್ಟಿಯಲ್ಲಿ ಅನಾವರಣಗೊಳಿಸಲಾಗಿದೆ. ಪೂಜ್ಯ ಬಾಪು ಅವರಿಗೆ ನನ್ನ ವಿನಮ್ರ ನಮನಗಳು" ಎಂದು ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ ಸಿಂಗ್ ಟ್ವೀಟ್ ಮಾಡಿದ್ದಾರೆ.
ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವವನ್ನು ತ್ಯಾಗ ಮಾಡಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಲಕ್ಷದ್ವೀಪ ದ್ವೀಪಗಳಲ್ಲಿ ಸ್ಥಾಪನೆಯಾದ ಮೊದಲ ಪ್ರತಿಮೆ ಇದಾಗಿದೆ.