ಮೇಲ್ತೆನೆ ವತಿಯಿಂದ ಬ್ಯಾರಿ ಭಾಷಾ ದಿನಾಚರಣೆ

ಮಂಗಳೂರು, ಅ.3: ಬ್ಯಾರಿ ಲೇಖಕರು-ಕಲಾವಿದರನ್ನು ಒಳಗೊಂಡ ಮೇಲ್ತೆನೆ ಸಂಘಟನೆಯ ವತಿಯಿಂದ ದೇರಳಕಟ್ಟೆಯ ನೇತಾಜಿ ಸುಭಾಷ್ ಚಂದ್ರ ಬೋಷ್ ಸರಕಾರಿ ಪ್ರೌಢಶಾಲೆಯಲ್ಲಿ ಬ್ಯಾರಿ ಭಾಷಾ ದಿನಾಚರಣೆ ಮತ್ತು ದಿನಾಚರಣೆಯ ಪ್ರಯುಕ್ತ ಏರ್ಡಿಸಲಾದ ಬ್ಯಾರಿ ವೀಡಿಯೋ ಭಾಷಣ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮ ರವಿವಾರ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಬ್ಯಾರಿ ಭಾಷೆಯಲ್ಲಿ ಪ್ರಾದೇಶಿಕ ವ್ಯತ್ಯಾಸವಿದೆ. ಅದನ್ನೇ ಮುಂದಿಟ್ಟುಕೊಂಡು ಕೆಲವರು ಬ್ಯಾರಿ ಭಾಷೆ ಎಂಬುದೇ ಇಲ್ಲ. ನಕ್ಕ್‌ನಿಕ್ಕ್ ಮತ್ತು ಮಲಾಮೆ ಭಾಷೆ ಮಾತ್ರ ಇರುವುದು ಎಂದು ಪ್ರತಿಪಾದಿಸಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.
ಅಭಿವೃದ್ಧಿ ಹೊಂದುತ್ತಿರುವ ದೇರಳಕಟ್ಟೆ ಸಮೀಪದ ನಾಟೆಕಲ್ ಜಂಕ್ಷನ್‌ನಲ್ಲಿ ವೃತ್ತವೊಂದು ನಿರ್ಮಾಣವಾಗಿದೆ. ಬ್ಯಾರಿ ಆಂದೋಲನದ ಪ್ರಮುಖ ರೂವಾರಿಗಳಲ್ಲಿ ಒಬ್ಬರಾದ ಮಾಜಿ ಶಾಸಕ ಬಿ.ಎಂ.ಇದಿನಬ್ಬ ಅವರ ಹೆಸರನ್ನು ಈ ವೃತ್ತಕ್ಕೆ ನಾಮಕಾರಣ ಮಾಡಬೇಕು ಎಂದು ಆಲಿಕುಂಞಿ ಪಾರೆ ಆಗ್ರಹಿಸಿದರು.
ಮೇಲ್ತೆನೆಯ ಅಧ್ಯಕ್ಷ ಮನ್ಸೂರ್ ಅಹ್ಮದ್ ಸಾಮಣಿಗೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿಗಳಾಗಿ ನೇತಾಜಿ ಸರಕಾರಿ ಪ್ರೌಢ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಇಸ್ಮಾಯೀಲ್ ಪನೀರ್, ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಅಬ್ದುಲ್ ಖಾದರ್, ಜ್ಯೂಸ್ ಮ್ಯಾಜಿಕ್‌ನ ಸಾಜಿದ್ ಜಿಎಂ, ಹ್ಯುಮಾನಿಟಿ ಫೌಂಡೇಶನ್‌ನ ಅಧ್ಯಕ್ಷ ನಾಸಿರ್ ಸಾಮಣಿಗೆ, ಮದನಿ ಪಿಯು ಕಾಲೇಜಿನ ಪ್ರಾಂಶುಪಾಲ ಇಸ್ಮಾಯಿಲ್ ಟಿ, ಉಪನ್ಯಾಸಕರಾದ ಸಿಹಾನ ಬಿ.ಎಂ., ಎ.ಕೆ. ನಂದಾವರ ಭಾಗವಹಿಸಿ ಮಾತನಾಡಿದರು.
ಸ್ಪರ್ಧೆಯಲ್ಲಿ ವಿಜೇತರಾದ ನವಾಝ್ ಕಡಂಬು, ತಾಹಿರಾ ಸಿರಾಜ್ ಕೂಳೂರು, ಶಾಹಿದಾ ಮೈಕಾಲ ಅವರಿಗೆ ಬಹುಮಾನ ವಿತರಿಸಲಾಯಿತು.
ಮೇಲ್ತೆನೆಯ ಪದಾಧಿಕಾರಿಗಳಾದ ಮುಹಮ್ಮದ್ ಭಾಷಾ ನಾಟೆಕಲ್, ಬಶೀರ್ ಕಲ್ಕಟ್ಟ ಉಪಸ್ಥಿತರಿದ್ದರು. ಯುವ ಸಾಹಿತಿ ರಫೀಕ್ ಕಲ್ಕಟ್ಟ ಸ್ವಾಗತಿಸಿದರು. ಹಂಝ ಮಲಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಅಶೀರುದ್ದೀನ್ ಸಾರ್ತಬೈಲ್ ಮತ್ತು ಮಂಗಳೂರ ರಿಯಾಝ್ ಕಾರ್ಯಕ್ರಮ ನಿರೂಪಿಸಿದರು. ಬಿಎಂ ಕಿನ್ಯ ವಂದಿಸಿದರು.









