ಉಡುಪಿ: ಯಕ್ಷಗಾನ ಕಲಾವಿದ ರಮೇಶ್ ಆಚಾರ್ಯರಿಗೆ ಅಭಿನಂದನಾ ಸಮಾರಂಭ

ಉಡುಪಿ, ಅ.3: ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ಎಂ.ಕೆ. ರಮೇಶ್ ಆಚಾರ್ಯ ಅಭಿನಂದನ ಸಮಿತಿ ವತಿಯಿಂದ ಯಕ್ಷಗಾನ ಮೇರು ಕಲಾವಿದ ಎಂ.ಕೆ.ರಮೇಶ್ ಆಚಾರ್ಯರ ಅಭಿನಂದನಾ ಕಾರ್ಯಕ್ರಮವನ್ನು ಶನಿವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪರ್ಯಾಯ ಪೀಠಾಧೀಶ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ಎಲ್ಲವನ್ನು ಓದಿ ತಿಳಿಯಲಾಗದ ಸಂದರ್ಭದಲ್ಲಿ ಪೂರ್ವಿಕರು ಮಾಡಿಕೊಟ್ಟ ಪರಿಪೂರ್ಣ ಕಲಾಪ್ರಕಾರ ಯಕ್ಷಗಾನದಿಂದಲೇ ದೇವರನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಎಂ.ಕೆ.ರಮೇಶ ಆಚಾರ್ಯರನ್ನು ಸನ್ಮಾನಿಸಲಾಯಿತು. ನಿವೃತ್ತ ಐಎಎಸ್ ಅಧಿಕಾರಿ ಟಿ.ಶ್ಯಾಮ ಭಟ್ಟರು ಅಧ್ಯಕ್ಷತೆ ವಹಿಸಿದ್ದರು.
ಅಭಿನಂದನಾ ಗ್ರಂಥ ’ಯಕ್ಷಾಂಗನೆ’ ಯನ್ನು ಹೊರನಾಡಿನ ಧರ್ಮದರ್ಶಿ ಭೀಮೇಶ್ವರ ಜೋಶಿ ಬಿಡುಗಡೆಗೊಳಿಸಿದರು. ಹಿರಿಯ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಅಭಿನಂದನಾ ಭಾಷಣ ಮಾಡಿದರು. ಸಮಿತಿಯ ಗೌರವಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಅಧ್ಯಕ್ಷ ಜಿ.ಟಿ.ಆಚಾರ್ಯ, ಉಪಾಧ್ಯಕ್ಷ ಜನಾರ್ದನ ಆಚಾರ್ಯ, ಸಂಚಾಲಕ ವಿಜಯ ಕುಮಾರ್ ಮುದ್ರಾಡಿ ಮೊದಲಾದವರು ಉಪಸ್ಥಿತರಿದ್ದರು.





