ದಾವಣಗೆರೆ: ಬಾಕಿ ಇರುವ ಶಿಷ್ಯವೇತನ ಪಾವತಿಸುವಂತೆ ಒತ್ತಾಯಿಸಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಧರಣಿ

ದಾವಣಗೆರೆ: ಕಳೆದ ಐದು ತಿಂಗಳಿನಿಂದ ಬಾಕಿ ಇರುವ ಶಿಷ್ಯವೇತನ ಪಾವತಿಸುವಂತೆ ಆಗ್ರಹಿಸಿ ನಗರದ ಜೆಜೆಎಂ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಸರ್ಕಾರ ಮತ್ತು ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿಯ ಗಮನ ಸೆಳೆಯಲು ಭಾನುವಾರವಾದ ಇಂದೂ ಸಹ ಬೀದಿ ನಾಟಕ ಮಾಡುವ ಮೂಲಕ ಪ್ರತಿಭಟನೆ ವ್ಯಕ್ತ ಪಡಿಸಿದರು.
ನಗರದ ಜಯದೇವ ವೃತ್ತದಲ್ಲಿ ಬೀದಿ ನಾಟಕ ಮಾಡುವ ಮೂಲಕ ವೈದ್ಯಕೀಯ ವಿದ್ಯಾರ್ಥಿಗಳು ಬಾಕಿ ಇರುವ ಶಿಷ್ಯ ವೇತನವನ್ನು ಪಾವತಿ ಮಾಡುವಂತೆ ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ ಪ್ರತಿಭಟನಾನಿರತ ವೈದ್ಯ ವಿದ್ಯಾರ್ಥಿಗಳು ಸರ್ಕಾರದ ನಿಯಮದಂತೆ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಸರಕಾರಿ ಕೋಟಾದ ಅಡಿಯಲ್ಲಿ ಆಯ್ಕೆಯಾಗಿರುವ ಜೆಜೆಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಇದೀಗ ನಗರದ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಈವರೆಗಿನ ಶಿಷ್ಯವೇತನವನ್ನು ನಮಗೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಶಿಷ್ಯ ವೇತನ ನೀಡುವಂತೆ ಕಾಲೇಜಿನ ಆಡಳಿತ ಮಂಡಳಿಯನ್ನು ಕೇಳಿದರೆ ನಾವು ಸರ್ಕಾರಕ್ಕೆ ನಾವು ಕ್ಲಿನಿಕಲ್ ಶುಲ್ಕವನ್ನು ಪಾವತಿ ಮಾಡುತ್ತಿದ್ದೇವೆ. ಕಾರಣ ಸರ್ಕಾರವೇ ಶಿಷ್ಯ ವೇತನ ನೀಡಬೇಕು ಎಂದು ಹೇಳಿದರೆ, ಸರ್ಕಾರ ವೈದ್ಯ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡ ಕಾಲೇಜುಗಳೇ ಅವರಿಗೆ ಶಿಷ್ಯವೇತನ ನೀಡಬೇಕೆಂದು ವಾದಿಸುತ್ತಿದೆ. ಈ ಇಬ್ಬರ ನಡುವೆ ಸಿಲುಕಿರುವ ನಾವುಗಳು ಅತಂತ್ರರಾಗಿದ್ದೇವೆ ಎಂದು ಕಿಡಿಕಾರಿದರು.
ಈ ರೀತಿ ಗೊಂದಲದ ಹೇಳಿಕೆಗಳನ್ನು ನೀಡುತ್ತಿರುವ ಸರ್ಕಾರ ಮತ್ತು ಆಡಳಿತ ಮಂಡಳಿ ಪರಸ್ಪರ ಮಾತುಕತೆ ನಡೆಸಿ ನಮ್ಮಗಳ ಶಿಷ್ಯವೇತನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನಮ್ಮಗಳ ಬೇಡಿಕೆ ಈಡೇರುವವರೆಗೂ ನಿರಂತರವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ನೂರಾರು ವೈದ್ಯಕೀಯ ವಿದ್ಯಾರ್ಥಿಗಳು ಇದ್ದರು.







