ಬದುಕನ್ನು ಗಟ್ಟಿಗೊಳಿಸುವ ಶಿಕ್ಷಣದ ಅವಶ್ಯಕತೆ ಇದೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ
ಹರೇಕಳ ಹಾಜಬ್ಬರಿಗೆ ಮಂಗೇಗೌಡ ಶಿಕ್ಷಣ ಪ್ರಶಸ್ತಿ ಪ್ರದಾನ

ಮಂಡ್ಯ, ಅ.3: ಶಿಕ್ಷಣದಿಂದ ಪಡೆಯುವ ಜ್ಞಾನ ಬದುಕನ್ನು ಗಟ್ಟಿಗೊಳಿಸುತ್ತದೆ. ಬದುಕನ್ನು ಗಟ್ಟಿಗೊಳಿಸುವ ಹಾಗೂ ರಾಷ್ಟ್ರ ಪ್ರೇಮಿಗಳನ್ನು ನಿರ್ಮಾಣ ಮಾಡುವ ಶಿಕ್ಷಣದ ಅವಶ್ಯಕತೆ ಇದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಟ್ಟಿದ್ದಾರೆ.
ಕರ್ನಾಟಕ ಸಂಘದ ಆವರಣದ ಕುವೆಂಪು ಬಯಲು ರಂಗಮಂದಿರದಲ್ಲಿ ಅಕ್ಷರದಾತ ಬಿ.ಎಚ್.ಮಂಗೇಗೌಡ ಶತಮಾನೋತ್ಸವ ಸಂಸ್ಮರಣೆ ಅಂಗವಾಗಿ ರವಿವಾರ ನಡೆದ ಬಿ.ಎಚ್.ಮಂಗೇಗೌಡ ಶಿಕ್ಷಣ, ಕೃಷಿಕ, ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ಬಿ.ಎಚ್.ಮಂಗೇಗೌಡ ಶತಮಾನೋತ್ಸವ ಸಂಸ್ಮರಣಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಶೇ.85 ರಷ್ಟು ಅಕ್ಷರಸ್ಥರು ಇರುವ ನಾಡಿನಲ್ಲಿ ಕ್ರಿಮಿನಲ್ ಪ್ರಕರಣಗಳು ಕಡಿಮೆಯಾಗಿಲ್ಲ. ಅಗತ್ಯ ಸಂಪನ್ಮೂಲಗಳಿದ್ದರೂ ಶೇ.20 ರಷ್ಟು ಜನರಿಗೆ ಬದುಕುವ ವಾತಾವರಣ ನೀಡಲಾಗಿಲ್ಲ. ಬಹಳ ಹಿಂದೆಯೇ ಈ ಬಗ್ಗೆ ಯೋಚಿಸಿ ಮಂಗೇಗೌಡರು ಕುಗ್ರಾಮದಲ್ಲಿ ವಸತಿ ಸಹಿತ ಶಾಲೆಯನ್ನು ಸ್ಥಾಪಿಸಿ ಶಿಕ್ಷಣವನ್ನು ನೀಡಿರುವುದು ಮಾದರಿಯಾದ ಕಾರ್ಯ ಎಂದರು ಎಂದು ಅವರು ಶ್ಲಾಘಿಸಿದರು.
ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸುಂದರವಾದುದು. ಅದಕ್ಕೆ ಮೀಸಲಾತಿ ಅಳವಡಿಸಿದಾಗ ಬಲಾಢ್ಯರು ಮಾತ್ರ ಅಧಿಕಾರಕ್ಕೆ ಬರುವ ಸ್ಥಿತಿ ಹೋಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಧಿಕಾರ ಸಿಗಬಹುದಾದಂತಹ ವ್ಯವಸ್ಥೆ ನಿರ್ಮಾಣವಾಗಿದೆ. ಕೂಲಿ ಕಾರ್ಮಿಕ ಮಹಿಳೆಯೂ ಇಂದು ಅಧ್ಯಕ್ಷೆಯಾಗಿ ಕೆಲಸ ಮಾಡುವಂತಾಗಿದೆ. ಪ್ರಜಾಪ್ರಭುತ್ವದ ಬೇರು ಗಟ್ಟಿಗೊಳಿಸಲು ಸಂಘಟನಾತ್ಮಕ ಪ್ರಯತ್ನ ಬೇಕು ಎಂದು ಅವರು ಹೇಳಿದರು.
ಹಿಂದೆ ಪ್ರಶಸ್ತಿಗಳೂ ಸಹ ಬಲಾಢ್ಯರಿಗೆ, ಎದುರಿಗೆ ಸಿಕ್ಕವರಿಗೆ ಸಿಗುತ್ತಿತ್ತು. ಆದರೆ, ಇಂದು ಹರೇಕಳ ಹಾಜಬ್ಬ, ಸಾಲುಮರದ ತಿಮ್ಮಕ್ಕರಂತಹವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿದೆ. ಇಂದು ಪುರಸ್ಕøತರಾಗುತ್ತಿರುವ ಶಿಕ್ಷಕ ಪುಟ್ಟರಾಮಯ್ಯ, ಕೃಷಿಕ ಶಿವರಾಂ ಅಂತವರಿಗೆ ಪ್ರಶಸ್ತಿ ಸಿಗುತ್ತಿರುವುದು ಅಭಿನಂದನೀಯ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಮಂಗೇಗೌಡರವರು ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಎಲ್ಲರನ್ನೂ ಒಂದಾಗಿ ತೆಗೆದುಕೊಂಡು ಹೋಗಿರುವ, ಜೊತೆಗೆ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಮಂಗೇಗೌಡರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಅಭಿನಂದನೀಯ ಎಂದರು.
ಸಮಾರಂಭ ಉದ್ಘಾಟಿಸಿದ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ಶಿಕ್ಷಣದ ಮೂಲಕ ಜ್ಞಾನವನ್ನು ಪಡೆದುಕೊಳ್ಳುವುದರ ಮೂಲಕ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ತಾವು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು ಕಾರ್ಯ ಮಾಡುತ್ತಿರುವುದಾಗಿ ತಿಳಿಸಿದರು.
ಮಂಗಳೂರಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಶಿಕ್ಷಣ ಪ್ರಶಸ್ತಿಯನ್ನು, ಬೊಮ್ಮೇನಹಳ್ಳಿ ಪ್ರಗತಿಪರ ಕೃಷಿಕ ಬಿ.ಶಿವರಾಮು ಅವರಿಗೆ ಕೃಷಿಕ ಪ್ರಶಸ್ತಿ ಹಾಗೂ ಚನ್ನಪಟ್ಟಣದ ನಿವೃತ್ತ ಶಿಕ್ಷಕ ಕೆ.ಪುಟ್ಟರಾಮಯ್ಯ ಅವರಿಗೆ ಬಿ.ಎಚ್.ಮಂಗೇಗೌಡ ಪ್ರಶಸ್ತಿಯನ್ನು 10,000 ರೂ. ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು. ವಿವಿಧ ಹಂತದ ವಿದ್ಯಾರ್ಥಿಗಳಾದ ಕೀರ್ತನಾ, ಅನುಷ ಹಾಗೂ ಶಿವರಾಜು ಅವರಿಗೆ ನಗದು ಸಹಾಯಧನ ನೀಡಲಾಯಿತು.
ಕೊಪ್ಪ ಎನ್‍ಎಸ್‍ಎಲ್ ಷುಗರ್ಸ್‍ನ ಹಿರಿಯ ಉಪಾಧ್ಯಕ್ಷ ಫಿಜಿಕೆ ದತ್ “ಅಕ್ಷರದಾತ” ಗ್ರಂಥ ಬಿಡುಗಡೆ ಮಾಡಿದರು. ಶಾಸಕರಾದ ಎಂ.ಶ್ರೀನಿವಾಸ್, ಕೆ.ಟಿ.ಶ್ರೀಕಂಠೇಗೌಡ, ಬೆಕ್ಕಳಲೆ ಗ್ರಾಮ ವಿದ್ಯಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಬಿ.ಎಂ.ರಘು, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಚಿಕ್ಕಮಂಗಪ್ಪ, ಚಂದಗಾಲು ಲೋಕೇಶ್ ಉಪಸ್ಥಿತರಿದ್ದರು.







