ಪಂಜಾಬ್ಗೆ ಸೋಲುಣಿಸಿದ ಆರ್ಸಿಬಿ ಪ್ಲೇ-ಆಫ್ಗೆ ಲಗ್ಗೆ

PHOTO: twitter.com/IPL
ಶಾರ್ಜಾ, ಅ.3:ಯಜುವೇಂದ್ರ ಚಹಾಲ್ ಸ್ಪಿನ್ ಮೋಡಿಗೆ ಕಂಗಲಾದ ಪಂಜಾಬ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೇವಲ 6 ರನ್ ನಿಂದ ಸೋಲುಂಡಿದೆ. ರೋಚಕ ಜಯ ಸಾಧಿಸಿರುವ ಆರ್ಸಿಬಿ ಐಪಿಎಲ್ನಲ್ಲಿ ಪ್ಲೇ-ಆಫ್ಗೆ ತೇರ್ಗಡೆಯಾಗಿದೆ.
ರವಿವಾರ ನಡೆದ ಐಪಿಎಲ್ನ 48ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ಸಿಬಿ ತಂಡ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್(57, 33 ಎಸೆತ, 3 ಬೌಂಡರಿ, 4 ಸಿಕ್ಸರ್) ಹಾಗೂ ದೇವದತ್ತ ಪಡಿಕ್ಕಲ್(40, 38 ಎಸೆತ, 4 ಬೌಂಡರಿ, 2 ಸಿಕ್ಸರ್) ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ಮುಹಮ್ಮದ್ ಶಮಿ(3-39)ಹಾಗೂ ಹೆನ್ರಿಕ್ಸ್(3-12) ತಲಾ ಮೂರು ವಿಕೆಟ್ಗಳನ್ನು ಪಡೆದರು.
ಗೆಲ್ಲಲು 165 ರನ್ ಗುರಿ ಪಡೆದ ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ ವೀರೋಚಿತ ಸೋಲುಂಡಿತು. ಆರಂಭಿಕ ಬ್ಯಾಟ್ಸ್ಮನ್ಗಳಾದ ಮಯಾಂಕ್ ಅಗರ್ವಾಲ್(57, 42 ಎಸೆತ, 6 ಬೌಂಡರಿ, 2 ಸಿಕ್ಸರ್)ಹಾಗೂ ರಾಹುಲ್(39, 35 ಎಸೆತ, 1 ಬೌಂಡರಿ, 2 ಸಿಕ್ಸರ್)ಮೊದಲ ವಿಕೆಟ್ಗೆ 10.5 ಓವರ್ ಗಳಲ್ಲಿ 91 ರನ್ ಗಳಿಸಿ ರನ್ ಚೇಸಿಂಗ್ಗೆ ಭದ್ರಬುನಾದಿ ಹಾಕಿಕೊಟ್ಟಿದ್ದರು.
ಆದರೆ ಈ ಇಬ್ಬರು ಬೇರ್ಪಟ್ಟ ಬಳಿಕ ಬಂದ ಬ್ಯಾಟ್ಸ್ಮನ್ಗಳು ಬೇಗನೆ ವಿಕೆಟ್ ಕೈಚೆಲ್ಲಿದರು. ನಿಕೊಲಸ್ ಪೂರನ್(3), ಸರ್ಫರಾಝ್ ಖಾನ್(0), ಶಾರೂಖ್ ಖಾನ್(16)ಹಾಗೂ ಮರ್ಕರಮ್(20) ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಹೆನ್ರಿಕ್ಸ್(ಔಟಾಗದೆ 12) ಹಾಗೂ ಹರ್ಪ್ರೀತ್(3)ಗೆ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು.
ಆರ್ಸಿಬಿ ಪರವಾಗಿ ಸ್ಪಿನ್ನರ್ ಚಹಾಲ್(3-29)ಯಶಸ್ವಿ ಬೌಲರ್ ಎನಿಸಿಕೊಂಡರು. ಗಾರ್ಟನ್(1-27), ಅಹ್ಮದ್(1-29) ತಲಾ ಒಂದು ವಿಕೆಟ್ ಪಡೆದರು. ಶಾರೂಖ್ ಖಾನ್ ರನೌಟಾದರು.