ಹಿರಿಯಡ್ಕ: ಉಚಿತ ಕಣ್ಣಿನ ತಪಾಸಣೆ, ನೇತ್ರದಾನ ನೋಂದಣಿ ಶಿಬಿರ

ಹಿರಿಯಡ್ಕ: ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನಾಚರಣೆಯ ಸೇವೆ ಮತ್ತು ಸಮರ್ಪಣೆ ಅಭಿಯಾನದ ಅಂಗವಾಗಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಬಿಜೆಪಿ ಹಾಗೂ ಇತರ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣೆ, ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ, ನೇತ್ರದಾನ ನೋಂದಣಿ ಮತ್ತು ಉಚಿತ ಕನ್ನಡಕ ವಿತರಣೆ ಶಿಬಿರವನ್ನು ಶನಿವಾರ ಅ.2ರಂದು ಹಿರಿಯಡ್ಕ ದೇವಾಡಿಗರ ಸಭಾ ಭವನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಉದ್ಘಾಟಿಸಿದರು. ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ.ಕೃಷ್ಣಪ್ರಸಾದ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು.ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ, ಮುಖಂಡರಾದ ಗೀತಾಂಜಲಿ ಸುವರ್ಣ, ಡಾ.ವಿಜಯೇಂದ್ರ ರಾವ್, ಡಾ.ರಾಮಚಂದ್ರ ಕಾಮತ್, ಡಾ.ವಿದ್ಯಾಧರ ಶೆಟ್ಟಿ ಕೆ., ಪೂರ್ಣಿಮಾ ಸುರೇಶ್, ಶಿಲ್ಪಾ ಜಿ.ಸುವರ್ಣ, ದಿನಕರ ಬಾಬು, ಪ್ರಸಾದ್ ಕುಮಾರ್, ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ್ ನಾಯಕ್ ಸ್ವಾಗತಿಸಿದರು. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ವಿಜೇತ್ ಬೆಳ್ಳರ್ಪಾಡಿ ವಂದಿಸಿದರು. ಶಿಬಿರದಲ್ಲಿ 582 ಮಂದಿ ಸಾರ್ವಜನಿಕರ ಉಚಿತ ನೇತ್ರ ತಪಾಸಣೆ ನಡೆಸಲಾಯಿತು.







