ಆಳುವ ವರ್ಗದ ದ್ವಿಮುಖ ನೀತಿಯಿಂದ ಹಿಂಸೆ ತಾಂಡವ: ಉದ್ಯಾವರ ನಾಗೇಶ್ ಕುಮಾರ್

ಉಡುಪಿ: ನಮ್ಮನ್ನು ಆಳುವ ವರ್ಗದ ದ್ವಿಮುಖ ನೀತಿಯಿಂದಾಗಿ ಪ್ರಸ್ತುತ ಗಾಂಧೀಜಿಯನ್ನು ಪೂಜಿಸುವ ದಿನವೇ ಗೋಡ್ಸೆಯ ಭಾವಚಿತ್ರಕ್ಕೂ ಪುಷ್ಪಾರ್ಚನೆ ಮಾಡಲಾಗುತ್ತಿದೆ. ಈ ರೀತಿ ಸ್ವಾಸ್ಥ ಕೆಟ್ಟಿರುವ ಸಮಾಜದಲ್ಲಿ ಇಂದು ಹಿಂಸೆ ತಾಂಡವಾಡುತ್ತಿದೆ ಎಂದು ರಂಗಕರ್ಮಿ ಉದ್ಯಾವ ನಾಗೇಶ್ ಕುಮಾರ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕೆ.ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗದ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಡಾ.ಪಿ.ದಯಾನಂದ ಪೈ ಮತ್ತು ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣ ಮಠ ಪಾರ್ಕಿಂಗ್ ಪ್ರದೇಶದ ಮಥುರ ಜಯಕೃಷ್ಣ ಕಲಾಭವನದಲ್ಲಿ ರವಿವಾರ ಆಯೋಜಿಸಲಾದ ಉಚಿತ ನೇತ್ರ ತಪಾಸಣಾ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಗಾಂಧಿ ಜಯಂತಿಯನ್ನು ನಾವೆಲ್ಲ ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯ ಸಿಕ್ಕಿ 75 ವರ್ಷದ ಬಳಿಕ ಗೋಡ್ಸೆ ಪರವಾಗಿ ಟ್ರೆಂಡ್ ಆಗುತ್ತಿದೆ. ಟ್ವಿಟರ್ ಖಾತೆಯಲ್ಲಿ ಗಾಂಧೀಜಿ ಹತ್ಯೆ ವಿಚಾರವನ್ನು ಮುಂದಿಟ್ಟುಕೊಂಡು ಗಾಂಧಿ ಸರಿಯಾ? ಗೋಡ್ಸೆ ಸರಿಯಾ ಎನ್ನುವ ಜಿಜ್ಞಾಸೆ ಹುಟ್ಟಿದೆ. ಹತ್ಯೆ ಯಾವುದಾರೂ ಹತ್ಯೆ ಸರಿಯಾ ತಪ್ಪೋ ಎನ್ನುವ ಚರ್ಚೆಗೆ ಒಳಗಾಗುತ್ತಾರೆ ಎನ್ನುವುದಾದರೆ ಆ ಸಮಾಜದ ಆರೋಗ್ಯ ಕೆಟ್ಟಿದೆ ಎಂದರ್ಥ. ಹತ್ಯೆ ಹತ್ಯೆಯೇ ಹೊರತು ಅದು ಸರಿಯಾಗುವುದಕ್ಕೆ ಸಾಧ್ಯವೇ ಇಲ್ಲ ಎಂದರು.
ಈ ದೇಶ ಎನ್ನುವುದು ಒಂದು ಧರ್ಮ, ಸಂಸ್ಕೃತಿ, ಭಾಷೆಯ ಗೂಡಲ್ಲ. ಸರ್ವಧರ್ಮಗಳ ಸಮನ್ವಯತೆ ಕೂಡಿದ ಬಹುವಚನ ಭಾರತ. ಏಕ ಸಂಸ್ಕೃತಿಯನ್ನು ಹೇರಿದಾಗ ಮಾತ್ರ ಭಾರತ ಉಳಿಯುವುದಕ್ಕೆ ಸಾಧ್ಯವಿಲ್ಲ. ಭಾರತದ ಈ ಚಿಂತನೆಯಿಂದಾಗಿ ಭಾರತವಾಗಿಯೇ ಉಳಿದಿದೆ ಎಂದು ಅವರು ತಿಳಿಸಿದರು.
ಸಮಾಜ ಸೇವಕ ಕೆ.ಕೃಷ್ಣಮೂರ್ತಿ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನಗರಸಭಾ ಸದಸ್ಯರಾದ ಅಮೃತಾ ಕೃಷ್ಣಮೂರ್ತಿ, ವಿಜಯ ಪೂಜಾರಿ, ಪ್ರಸಾದ್ ನೇತ್ರಾಲಯದ ನೇತ್ರ ತಜ್ಞ ಡಾ.ಶರತ್ ಹೆಗ್ಡೆ, ಉದ್ಯಮಿ ಪ್ರಸಾದ್ ಕಾಂಚನ್, ಪ್ರಮುಖರಾದ ಹರೀಶ್ಚಂದ್ರ, ನಿರೂಪಮಾ ಪ್ರಸಾದ್ ಶೆಟ್ಟಿ, ಹಬೀಬ್ ಅಲಿ, ಯಶೋಧಾ ಆಟೋ ಯೂನಿಯನ್ ಅಧ್ಯಕ್ಷ ಉದಯ್, ಕೃಷ್ಣಮೂರ್ತಿ ಆಚಾರ್ಯ ಬಳಗದ ಅಧ್ಯಕ್ಷ ಚರಣ್‌ರಾಜ್ ಬಂಗೇರ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್, ನಗರಸಭೆ ಮಾಜಿ ಅಧ್ಯಕ್ಷ ಯುವರಾಜ್ ಮೊದಲಾದವರು ಉಪಸ್ಥಿತರಿದ್ದರು.







