ಪರ್ಕಳದ ದೇವಿನಗರದಲ್ಲಿ ಶಂಖದ ಹುಳುಗಳ ಬಾಧೆ: ಸ್ಥಳೀಯರಲ್ಲಿ ತೀವ್ರ ಆತಂಕ
ಮನೆ, ಅಂಗಡಿ, ಮರಗಳಲ್ಲಿ ಹುಳಗಳ ಹಿಂಡು

ಉಡುಪಿ: ಪರ್ಕಳದ ದೇವಿನಗರ ಪರಿಸರದಲ್ಲಿ ಬಸವನ ಹುಳು/ಶಂಖದ ಹುಳುಗಳ(ಆಫ್ರಿಕನ್ ಜಯಂಟ್ ಸ್ನೈಲ್) ಭಾದೆ ಕಂಡುಬಂದಿದ್ದು, ಅಡಿಕೆ, ತೆಂಗು ಸೇರಿದಂತೆ ವಿವಿಧ ಗಿಡಗಳಿಗೆ ಹಾನಿ ಉಂಟು ಮಾಡುವ ಬಗ್ಗೆ ಸ್ಥಳೀಯರಲ್ಲಿ ಆತಂಕ ಸೃಷ್ಠಿಸಿದೆ.
ಈ ಪರಿಸರದ ಹೆಚ್ಚಿನ ಎಲ್ಲಾ ಮನೆಗಳಲ್ಲಿ ಹುಳಗಳ ಹಿಂಡು ಕಂಡುಬರುತ್ತಿವೆ. ದೇವಿನಗರದ ನಿವಾಸಿಗಳಾದ ಉದಯಕುಮಾರ್, ಸರಸ್ವತಿ, ದಿಲ್ಶಾದ್, ಅಬೂಬಕ್ಕರ್, ನಿಹಾಲ್ ಎಂಬವರ ಮನೆಗಳು ಹಾಗೂ ಹೋಟೆಲ್ ಮಂದಾರದ ಸುತ್ತಮುತ್ತ ಯಥೇಚ್ಛವಾಗಿ ಈ ಹುಳಗಳ ರಾಶಿ ಕಾಣಸಿಗುತ್ತಿದೆ. ಪೇಟೆ, ಮನೆಗಳ ಗೋಡೆ, ತೆಂಗಿನಮರ, ಗಿಡಗಳ ಮಧ್ಯೆ, ಮನೆಯ ಆವರಣದ ಗೋಡೆಗಳಲ್ಲಿ ಹುಳಗಳು ಹರಿದಾಡುತ್ತಿವೆ.
ಅಲ್ಲದೆ ಮನೆಯ ಒಳಗೂ ಇವುಗಳು ಸಂಚರಿಸುತ್ತಿವೆ. ಸ್ಥಳೀಯರು ಈ ಹುಳ ಬಾಧೆಯಿಂದ ತೊಂದರೆಗೆ ಒಳಗಾಗಿಗದ್ದಾರೆ. ಇದರಿಂದ ತಪ್ಪಿಸಲು ಸೂಕ್ತವಾದ ಕ್ರಮವನ್ನು ನಗರಸಭೆ ಹಾಗೂ ಗ್ರಾಪಂಗೆ ಒಳಪಟ್ಟ ಆರೋಗ್ಯ ಅಧಿಕಾರಿಗಳು ತೆಗೆದುಕೊಳ್ಳಬೇಕು ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ಗಣೇಶ್ ರಾಜ್ ಸರಳೇಬೆಟ್ಟು, ಪರ್ಕಳದ ರಾಜೇಶ್ ಪ್ರಭು ಒತ್ತಾಯಿಸಿದ್ದಾರೆ.
ನಿಶಾಚರಿ ಹುಳಗಳು: ಈ ಹುಳಗಳು ದ್ವಿಲಿಂಗಗಳಾಗಿದ್ದು, ಸರಿಸುಮಾರು 50-200 ಹಳದಿ ಬಣ್ಣದ ಮೊಟ್ಟೆಗಳನ್ನು ಮಣ್ಣಿನ ಮೇಲ್ಪದರದಲ್ಲಿ ಇಡುತ್ತವೆ. ಈ ಮೊಟ್ಟೆಗಳಿಂದ ಒಂದು ವಾರದೊಳಗೆ ಮರಿಹುಳುಗಳು ಹೊರ ಬರುತ್ತವೆ. ಪ್ರೌಢಾವಸ್ಥೆಗೆ ಬರಲು ಒಂದು ವರ್ಷ ಬೇಕಾಗುತ್ತದೆ. ಇದರ ಜೀವಿತಾವಧಿ 3-5ವರ್ಷಗಳಾಗಿವೆ. ಈ ಹುಳುಗಳು ನಿಶಾಚರಿ(ರಾತ್ರಿ ಸಮಯದಲ್ಲಿ ಸಂಚಾರ)ಗಳಾಗಿವೆ.
ಮಳೆಗಾಲ ಮುಗಿಯುವ ಹಂತದಲ್ಲಿ ಮರಿಗಳು ಹೊರ ಬಂದರೆ ತೇವಾಂಶದ ಕೊರತೆಯಿಂದಾಗಿ ಸುಪ್ತಾವಸ್ಥೆಗೆ ಹೋಗುವುದರಿಂದ ಇವುಗಳ ಬೆಳವಣಿಗೆ ನಿಧಾನವಾಗುತ್ತದೆ. ಮಳೆಗಾಲದಲ್ಲಿ ಬೆಳೆಗಳ ಎಲೆಗಳು, ಕಾಂಡ, ಹಣ್ಣು ಹಾಗೂ ಹೂವು ಗಳನ್ನು ತಿಂದು ಹೆಚ್ಚಿನ ಹಾನಿ ಉಂಟು ಮಾಡುತ್ತದೆ ಎನ್ನುತ್ತಾರೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿ ಹಾಗೂ ಕೀಟ ತಜ್ಞ ಡಾ.ಸಚಿನ್ ಯು.ಎಸ್.
‘ಹುಳುಗಳ ಬೆಳವಣಿಗೆಗೆ ಪ್ರತಿಕೂಲ ವಾತಾವರಣವನ್ನು ಒದಗಿಸದೆ ತೋಟ ಗಳ ಕಳೆಗಳನ್ನು ನಿರ್ಮೂಲನೆ ಮಾಡಿ ಶುಚಿಯಾಗಿಡಬೇಕು.
ತೋಟಗಳಲ್ಲಿ ಕೃಷಿ ತ್ಯಾಜ್ಯಗಳನ್ನು ಗುಂಪು ಹಾಕದೇ ಹುಳುಗಳಿಗೆ ಅಡಿಗಿಕೊಳ್ಳಲು ಸ್ಥಳಗಳು ಸಿಗದಂತೆ ಮಾಡಬೇಕು. ಹಾನಿಯ ಪ್ರಮಾಣ ಕಡಿಮೆ ಇರುವಾಗ ಅಥವಾ ಮೊದಲ ಹಂತದಲ್ಲಿಯೇ ಇವುಗಳನ್ನು ಹಿಡಿದು ನಾಶಪಡಿಸುವುದು ಪರಿಣಾಮಕಾರಿ ಯಾಗಿದೆ. ಬ್ಲೀಚಿಂಗ್ ಪುಡಿ/ಸುಣ್ಣದ ಪುಡಿಯನ್ನು ದೂಳೀಕರಿಸಿ ಹುಳುಗಳನ್ನು ನಾಶಮಾಡಬಹುದು’ ಎಂದು ಅವರು ತಿಳಿಸಿದ್ದಾರೆ.
ಕಳೆದ ವರ್ಷ ಮಳೆಗಾಲದಲ್ಲಿ ಕಾರ್ಕಳ ಪರಿಸರದಲ್ಲಿ ಈ ಹುಳಗಳ ಭಾದೆ ಹೆಚ್ಚು ಕಂಡುಬಂದಿತ್ತು. ಈ ವರ್ಷ ಕೂಡ ಅಲ್ಲೇ ಮಳೆಗಾದಲ್ಲಿ ಹೆಚ್ಚು ಕಂಡು ಬಂದಿದೆ. ಮಳೆಗಾಲ ಮುಗಿಯುತ್ತಿದ್ದಂತೆ ಇದರ ಪ್ರಮಾಣ ಕಡಿಮೆಯಾಗುತ್ತದೆ. ಈಗ ಕೆಲವು ದಿನಗಳಿಂದ ಮಳೆ ಬರುತ್ತಿರುವುದರಿಂದ ಪರ್ಕಳ ಪ್ರದೇಶದಲ್ಲಿ ಈ ಹುಳಗಳು ಕಂಡುಬಂದಿರುವ ಸಾಧ್ಯತೆ ಇದೆ. ಬಿಸಿಲು ಹೆಚ್ಚಾದಂತೆ ಇವುಗಳ ಪ್ರಮಾಣ ಕಡಿಮೆಯಾಗುತ್ತದೆ.
-ಡಾ.ಸಚಿನ್ ಯು.ಎಸ್., ಕೀಟ ತಜ್ಞ
ಪರ್ಕಳ ಪ್ರದೇಶದಲ್ಲಿ ಈ ಹುಳಬಾಧೆ ಸಮಸ್ಯೆಯು ಕಳೆದ ಮೂರು ವರ್ಷಗಳಿಂದ ಇದ್ದು, ಈ ಬಾರಿ ಹೆಚ್ಚು ಕಾಣಿಸಿ ತೊಂದರೆ ಉಂಟು ಮಾಡು ತ್ತಿದೆ. ಕಳೆದ ಎರಡು ದಿನಗಳಿಂದ ಈ ಹುಳದ ಸಂಖ್ಯೆ ಇನ್ನಷ್ಟು ಜಾಸ್ತಿಯಾಗಿದೆ. ಮರಗಳಲ್ಲಿ, ಆವರಣ ಗೋಡೆಯಲ್ಲಿ ಕಂಡು ಬರುತ್ತಿದೆ. ಸಾಧ್ಯವಾದಷ್ಟು ಹುಳ ಗಳನ್ನು ನಾಶ ಪಡಿಸಲಾಗಿದೆ. ಆದರೂ ಹುಳಗಳ ಸಂಖ್ಯೆ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ.
-ನಿಹಾಲ್, ಪರ್ಕಳ ದೇವಿನಗರ ನಿವಾಸಿ







