ಸನ್ ರೈಸರ್ಸ್ ಮೇಲೆ ಸವಾರಿ ಮಾಡಿದ ಕೋಲ್ಕತಾ ನೈಟ್ ರೈಡರ್ಸ್

Image Source : IPLT20.COM
ದುಬೈ,ಅ.3: ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ ಟೂರ್ನಿಯಲ್ಲಿ ರವಿವಾರ ನಡೆದ 49ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ಪ್ಲೇ ಆಫ್ ಹಂತಕ್ಕೇರುವ ಆಸೆಯನ್ನು ಜೀವಂತವಾಗಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಹೈದರಾಬಾದ್ ತಂಡ ಕೆಕೆಆರ್ ಬೌಲರ್ ಗಳ ಕರಾರುವಾಕ್ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 115 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಕೆಕೆಆರ್ ತಂಡವು ಆರಂಭಿಕ ಬ್ಯಾಟ್ಸ್ ಮನ್ ಶುಭಮನ್ ಗಿಲ್(57 ರನ್, 51 ಎಸೆತ, 10 ಬೌಂಡರಿ)ಹಾಗೂ ನಿತೀಶ್ ರಾಣಾ(25,33 ಎಸೆತ, 3 ಬೌಂ.)ಜವಾಬ್ದಾರಿಯುತ ಬ್ಯಾಟಿಂಗ್ ನಿಂದಾಗಿ 19.4 ಓವರ್ ಗಳಲ್ಲಿ 119 ರನ್ ಗಳಿಸಿತು.
ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ (ಔಟಾಗದೆ 18 ರನ್)ಬೌಂಡರಿ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದೇ ವೇಳೆ ಅವರು ಐಪಿಎಲ್ ನಲ್ಲಿ 4,000 ರನ್ ಪೂರೈಸಿದ ಸಾಧನೆಯನ್ನು ಮಾಡಿದರು.
ಕಡಿಮೆ ಸ್ಕೋರ್ ಗಳಿಸಿದರೂ ಕೆಕೆಆರ್ ಗೆ ಕೊನೆಯ ತನಕ ಪೈಪೋಟಿ ನೀಡಿದ ಹೈದರಾಬಾದ್ ಬೌಲಿಂಗ್ ವಿಭಾಗದಲ್ಲಿ ವೇಗದ ಬೌಲರ್ ಜೇಸನ್ ಹೋಲ್ಡರ್ (2-32)ಎರಡು ವಿಕೆಟ್ ಪಡೆದರು. ರಶೀದ್ ಖಾನ್(1-23) ಹಾಗೂ ಸಿದ್ದಾರ್ಥ್ ಕೌಲ್(1-17) ತಲಾ ಒಂದು ವಿಕೆಟ್ ಪಡೆದರು.