ಬೆಂಗಳೂರು; 3.2 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ

ಬೆಂಗಳೂರು, ಅ.3: ಮಾದಕ ವಸ್ತುವನ್ನು ಸಾಗಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ರೈಲ್ವೆ ಪ್ರೊಟೆಕ್ಷನ್ ಫೋರ್ಸ್‍ನ ಮಹಿಳಾ ತಂಡವೂ ಓರ್ವನನ್ನು ಬಂಧಿಸಿ 3.2 ಕೋಟಿ ರೂ. ಮೌಲ್ಯದ 640 ಗ್ರಾಂ ಕ್ರಿಸ್ಟಲ್ ಮೆಥಾಂಫೆಟಮೈನ್ ಜಪ್ತಿ ಮಾಡಿದ್ದಾರೆ.
ಒಡಿಶಾ ಮೂಲದ 44 ವರ್ಷದ ವ್ಯಕ್ತಿ ಬಂಧಿತ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ.
ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಒಡಿಶಾದ ಭುವನೇಶ್ವರಕ್ಕೆ ಅ.1 ರಂದು ಪ್ರಶಾಂತಿ ಎಕ್ಸ್‍ಪ್ರೆಸ್ ರೈಲು ಹೊರಟಿತ್ತು. ಈ ಸಂದರ್ಭದಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ವಿಶೇಷವಾಗಿ ರಚಿಸಲಾದ ಆರ್‍ಪಿಎಫ್ ಶಕ್ತಿ ಘಟಕದ ಆರು ಸದಸ್ಯರ ತಂಡವು ಗಸ್ತು ತಿರುಗುತ್ತಿತ್ತು.
ಆಗ ಆರೋಪಿ ಅನುಮಾನಸ್ಪದ ರೀತಿಯಲ್ಲಿ ಓಡಾಡುತ್ತಿರುವುದನ್ನು ಗಮನಿಸಿದ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇನ್ನು, ವಶಕ್ಕೆ ಪಡೆದಿರುವ `ಐಸ್' ಅಥವಾ `ಗ್ಲಾಸ್' ಎಂದೂ ಕರೆಯಲ್ಪಡುವ ಜನಪ್ರಿಯ ಮಾದಕ ವಸ್ತು ಹೆಚ್ಚು ವ್ಯಸನಕಾರಿ ಮತ್ತು ಕೇಂದ್ರ ನರಮಂಡಲದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಪೊಲೀಸರು ಹೇಳಿದ್ದಾರೆ.





