ಮೂರನೇ ಅಲೆ ಬಗ್ಗೆ ಎಚ್ಚರ ವಹಿಸಬೇಕು: ಆರೋಗ್ಯ ಸಚಿವ ಡಾ.ಸುಧಾಕರ್
‘ರಾಜ್ಯಕ್ಕೆ ಪ್ರಶಸ್ತಿ, ಹೊಸ ಹುರುಪು ತಂದ ಗೌರವ'

ಬೆಂಗಳೂರು, ಅ. 3: ‘ದಿ ಇಂಡಿಯಾ ಟುಡೇ ಗ್ರೂಪ್‍ನಿಂದ ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಅತ್ಯುತ್ತಮ ರಾಜ್ಯ' ವಿಭಾಗದಡಿ ಕರ್ನಾಟಕಕ್ಕೆ ‘ಇಂಡಿಯಾ ಟುಡೇ ಹೆಲ್ತ್ ಗಿರಿ' ಪ್ರಶಸ್ತಿ ದೊರೆತಿದ್ದು, ಇದು ಇನ್ನಷ್ಟು ಕೆಲಸ ಮಾಡಲು ಹುರುಪು ತಂದಿದೆ' ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ರವಿವಾರ ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಪ್ರಧಾನಿ ಮೋದಿಯವರು ಕೋವಿಡ್ ವಿರುದ್ಧ ಹೋರಾಟ ನಡೆಸಲು ಎಲ್ಲ ರಾಜ್ಯಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ಕೇಂದ್ರ ಸರಕಾರ ಲಾಕ್‍ಡೌನ್ ಘೋಷಿಸುವ ಮುನ್ನವೇ ರಾಜ್ಯದಲ್ಲಿ ಲಾಕ್‍ಡೌನ್ ಜಾರಿಯಾಗಿತ್ತು. ರಾಜ್ಯದಲ್ಲಿ ಹಿಂದೆ ಏಳೆಂಟು ಸಾವಿರ ಆಕ್ಸಿಜನ್ ಹಾಸಿಗೆಗಳಿದ್ದು, 30 ಸಾವಿರ ಹಾಸಿಗೆಗಳನ್ನು ಅಳವಡಿಸಲಾಗಿದೆ.
ವೆಂಟಿಲೇಟರ್‍ಗಳನ್ನೂ ಹೊಸದಾಗಿ ಅಳವಡಿಸಲಾಗಿದೆ. ದಾಖಲೆಯಂತೆ 4 ಸಾವಿರ ವೈದ್ಯರನ್ನು ನೇಮಿಸಲಾಗಿದೆ. ಅರೆ ವೈದ್ಯಕೀಯ, ನರ್ಸ್ ಮೊದಲಾದ ಸಿಬ್ಬಂದಿಯನ್ನು ಅತಿಹೆಚ್ಚು ಸಂಖ್ಯೆಯಲ್ಲಿ ನೇಮಕ ಮಾಡಲಾಗಿದೆ. 5 ‘ಟಿ' ಕ್ರಮ ಅಳವಡಿಸಿಕೊಂಡು, ತಂತ್ರಜ್ಞಾನ ಬಳಸಿಕೊಂಡು ಕೋವಿಡ್ ನಿಯಂತ್ರಿಸಲಾಗಿದೆ. ಅನೇಕ ಆಪ್‍ಗಳನ್ನು ಬಳಸಿಕೊಳ್ಳಲಾಗಿದೆ. ಈ ಎಲ್ಲ ಕ್ರಮಗಳಿಂದ ರಾಜ್ಯಕ್ಕೆ ಈ ಗೌರವ ಬಂದಿದೆ' ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
‘ಹಿಂದೆ ಆಕ್ಸಿಜನ್ 300ರಿಂದ 400 ಟನ್ ಬೇಡಿಕೆ ಇತ್ತು. ಈಗ 1,300 ಟನ್‍ಗೆ ಆಕ್ಸಿಜನ್ ಶೇಖರಣಾ ಸಾಮಥ್ರ್ಯ ಹೆಚ್ಚಿಸಿಕೊಳ್ಳಲಾಗಿದೆ. ರೆಮ್‍ಡಿಸಿವಿರ್, ಆಂಪೆÇಟೆರಿಸಿನ್ ಕೊರತೆಯಾಗದಂತೆ ಹೆಚ್ಚು ಖರೀದಿ ಮಾಡಲಾಗಿದೆ. ಕೋವಿಡ್ ಲಸಿಕೆ ನೀಡುವುದರಲ್ಲೂ ದಾಖಲೆ ಸೃಷ್ಟಿಯಾಗಿದೆ. ಪ್ರಧಾನಿ ಜನ್ಮದಿನದ ಒಂದೇ ದಿನ 31.60 ಲಕ್ಷ ಲಸಿಕೆ ನೀಡಲಾಗಿದೆ. 1.48 ಕೋಟಿ ಲಸಿಕೆಯನ್ನು ಸೆಪ್ಟೆಂಬರ್‍ನಲ್ಲಿ ನೀಡಲಾಗಿದೆ.
ಡಿಸೆಂಬರ್ ಅಂತ್ಯಕ್ಕೆ ಎಲ್ಲರಿಗೂ ಲಸಿಕೆ ನೀಡುವ ಗುರಿ ಇದೆ. ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಕೇಂದ್ರ ಆರೋಗ್ಯ ಸಚಿವರೊಂದಿಗೆ ಚರ್ಚಿಸಿದ್ದು, ಖಾಸಗಿ ಕಂಪನಿಯೊಂದಿಗೆ ಅಂತಿಮ ಸುತ್ತಿನ ಮಾತುಕತೆ ನಡೆದಿದೆ. ಆದಷ್ಟು ಬೇಗ ಲಸಿಕೆ ಸಿಗಬಹುದು ಎಂಬ ಆಶಾವಾದ ಇದೆ ಎಂದು ಸುಧಾಕರ್ ತಿಳಿಸಿದರು.
ಮೂರನೇ ಅಲೆ ಬರಬೇಕೆಂದೇನಿಲ್ಲ: ಕೋವಿಡ್ ಮೂರನೇ ಅಲೆ ಬರಲೇಬೇಕು ಎಂದೇನಿಲ್ಲ. ‘ಸೆರೋ' ಸರ್ವೆಯಲ್ಲಿಯೂ ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದು ಕಂಡುಬಂದಿದೆ. ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ನೋಡಬೇಕಿದೆ. ಆದರೆ, ಲಸಿಕೆ ನೀಡುತ್ತಿರುವುದರಿಂದ ಹೆಚ್ಚು ಸಮಸ್ಯೆಯ ಆತಂಕವಿಲ್ಲ. ಆದರೂ, ಹೊಸ ವೈರಾಣು ಬಂದರೆ ಎಚ್ಚರದಿಂದ ಇರಬೇಕಾಗುತ್ತದೆ. ಸಾಂಕ್ರಾಮಿಕವನ್ನೂ ಇನ್ನೂ ಸಂಪೂರ್ಣ ಗೆದ್ದಿಲ್ಲ. ಹೀಗಾಗಿ ದೊಡ್ಡ ಸಭೆ, ಸಮಾರಂಭಕ್ಕೆ ಕಡಿವಾಣ ಹಾಕಬೇಕು' ಎಂದು ಡಾ.ಸುಧಾಕರ್ ಸ್ಪಷ್ಟಪಡಿಸಿದರು.
ಒಂದನೇ ತರಗತಿಯಿಂದಲೇ ಶಾಲೆ ಆರಂಭಿಸಬೇಕು: ‘ಶಾಲೆಗಳಲ್ಲಿ ಎಲ್ಲೂ ಆತಂಕ ಕಂಡುಬಂದಿಲ್ಲ. ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆಯೂ ನೋಡಬೇಕು. ಸಣ್ಣ ಮಕ್ಕಳಲ್ಲಿ ಕೊರೊನ ಸೋಂಕು ಸುಲಭವಾಗಿ ಬರುವುದಿಲ್ಲ. ಹೀಗಾಗಿ ಒಂದರಿಂದ ಐದನೇ ತರಗತಿ ಶಾಲೆಯನ್ನೂ ಆರಂಭಿಸಬಹುದು. ಆದರೆ, ಪೋಷಕರ ಅಭಿಪ್ರಾಯ ಗಮನಿಸಿ ರಾಜ್ಯ ಸರಕಾರ ಹಂತ-ಹಂತವಾಗಿ ಶಾಲೆ ಆರಂಭಿಸುತ್ತಿದೆ. ಮಕ್ಕಳಿಗೆ ತೊಂದರೆಯಾಗುವುದು ಗಮನಕ್ಕೆ ಬಂದರೆ ಸರಕಾರ ತಕ್ಷಣ ತೀರ್ಮಾನ ಹಿಂತೆಗೆದುಕೊಳ್ಳುತ್ತದೆ' ಎಂದು ಸಚಿವ ಸುಧಾಕರ್ ತಿಳಿಸಿದರು.
ರಾಜ್ಯದಲ್ಲಿ 2,500 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ವೈದ್ಯರು, ಇತರೆ ಸಿಬ್ಬಂದಿಗೆ ನೆರವಾಗಲು ವಸತಿ ಸೌಲಭ್ಯ ನೀಡಲಾಗುತ್ತಿದೆ. ಇದನ್ನು ಕೇಂದ್ರ ಆರೋಗ್ಯ ಸಚಿವರಿಗೆ ವಿವರಿಸಲಾಗುವುದು. ಕೋವಿಡ್ ಸೋಂಕಿನ ಸಂದರ್ಭದಲ್ಲಿ ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸಲು ಸರಕಾರ ಕ್ರಮ ವಹಿಸಿದೆ ಎಂದು ತಿಳಿಸಿದರು.







