ಹರಿದ್ವಾರ: ಉದ್ರಿಕ್ತ ಗುಂಪಿನಿಂದ ಕ್ರೈಸ್ತ ಪ್ರಾರ್ಥನಾ ಗೃಹ ಧ್ವಂಸ
'ಜೈ ಶ್ರೀರಾಂ', 'ವಂದೇ ಮಾತರಂ' ಘೋಷಣೆ ಕೂಗುತ್ತಿದ್ದ ದಾಳಿಕೋರರು: ಸ್ಥಳೀಯರ ಆರೋಪ

ಸಾಂದರ್ಭಿಕ ಚಿತ್ರ (source: PTI)
ಡೆಹ್ರಾಡೂನ್, ಅ.4:: ಉತ್ತರಾಖಂಡದ ಹರಿದ್ವಾರ ಜಿಲ್ಲೆರ ರೂರ್ಕಿ ಎಂಬಲ್ಲಿ ಸುಮಾರು 500 ಮಂದಿಯ ಗುಂಪೊಂದು ಕ್ರೈಸ್ತ ಪ್ರಾರ್ಥನಾ ಗೃಹದ ಮೇಲೆ ದಾಳಿ ನಡೆಸಿ ಪ್ರಾರ್ಥನಾ ಮಂದಿರ ಧ್ವಂಸ ಮಾಡಿದ್ದಲ್ಲದೆ, ಅಲ್ಲಿದ್ದವರನ್ನು ಥಳಿಸಿದೆ ಎಂದು ರವಿವಾರದ ಪ್ರಾರ್ಥನೆಗೆ ಸೇರಿದ್ದ ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ದಾಳಿಕೋರ ಗುಂಪು 'ಜೈ ಶ್ರೀರಾಂ' ಹಾಗೂ 'ವಂದೇ ಮಾತರಂ' ಘೋಷಣೆ ಕೂಗುತ್ತಿದ್ದರು ಎಂದು ಅವರು ಹೇಳಿದ್ದಾರೆ. ಈ ದೂರಿನ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಘಟನೆಗೆ ಕಾರಣರಾದವರನ್ನು ಬಂಧಿಸಲಾಗುವುದು ಎಂದು ವೃತ್ತ ನಿರೀಕ್ಷಕ ವಿವೇಖ್ ಕುಮಾರ್ ಹೇಳಿದ್ದಾರೆ.
ರವಿವಾರ ಬೆಳಗ್ಗೆ 10 ಗಂಟೆಯ ವೇಳೆಗೆ ರೂರ್ಕೆಲಾದ ಸೋಮನಿಪುರಂ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯರೂ ಸೇರಿದ್ದ ಸುಮಾರು 500 ಮಂದಿಯ ಗುಂಪು ಘೋಷಣೆಗಳನ್ನು ಕೂಗುತ್ತಾ ಆಗಮಿಸಿ, ಕ್ರೈಸ್ತ ಮಿಷನರಿಗಳು ಧಾರ್ಮಿಕ ಸಭೆ ಮತ್ತು ಸೇವಾ ಕಾರ್ಯದ ಹೆಸರಿನಲ್ಲಿ ಹಿಂದೂ ಧರ್ಮದಿಂದ ಮತಾಂತರ ಮಾಡುತ್ತಿವೆ ಎಂದು ಆಪಾದಿಸಿದರು. ಪ್ರಾರ್ಥನಾ ಗೃಹವನ್ನು ಧ್ವಂಸಗೊಳಿಸಿದ ಗುಂಪು, ಕ್ರೈಸ್ತ ಭಕ್ತರನ್ನು ಥಳಿಸಿತು ಎನ್ನಲಾಗಿದೆ.
ಪ್ರಾರ್ಥನಾಗೃಹದಲ್ಲಿ ಹಲವು ವರ್ಷಗಳಿಂದ ಇದ್ದ ಎನ್.ವಿಲ್ಸನ್ ಹೇಳುವ ಪ್ರಕಾರ, "ಕ್ರೈಸ್ತ ಧರ್ಮದವರ ಮೇಲೆ ಹಲ್ಲೆ ನಡೆಸಿ, ನಿಂದಿಸಿ, ಧಾರ್ಮಿಕ ಮತಾಂತರದ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಿದರು. ಎರಡು ದಶಕಗಳಿಂದ ನಾವು ಪ್ರಾರ್ಥನೆ ಮಾಡುತ್ತಾ ಬರುತ್ತಿದ್ದೇವೆ. ಈ ಪ್ರಾರ್ಥನಾಗೃಹ ಸಾಮೂಹಿಕ ಸಭೆಗಳನ್ನು ಮತ್ತು ದತ್ತಿ ಚಟುವಟಿಕೆಗಳನ್ನು ನಡೆಸುತ್ತಿದೆ"







