ಲಖೀಂಪುರ್ ಖೇರಿಗೆ ತೆರಳುತ್ತಿದ್ದ ಪ್ರಿಯಾಂಕಾ ಗಾಂಧಿಯ ಬಂಧನ

Photo: PTI
ಹೊಸದಿಲ್ಲಿ,ಅ.4: ಉತ್ತರಪ್ರದೇಶದ ಲಖೀಂಪುರ ಖೇರಿಯಲ್ಲಿ ರವಿವಾರ ಕೃಷಿ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರು ಸಾವನ್ನಪ್ಪಿದ ಘಟನೆಗೆ ವಿವಿಧ ರಾಜಕೀಯ ಪಕ್ಷಳ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂಸಾಚಾರದಲ್ಲಿ ಮೃತಪಟ್ಟವರ ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಲು ತೆರಳುತ್ತಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ರವಿವಾರ ರಾತ್ರಿ ಮುಂಜಾನೆ 4:00 ಗಂಟೆ ವೇಳೆಗೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆಂದು ತಿಳಿದುಬಂದಿದೆ.
ಸೀತಾಪುರ್ನಲ್ಲಿ ತನ್ನನ್ನು ನಿಲ್ಲಿಸಿದ ಪೊಲೀಸ್ ಸಿಬ್ಬಂದಿಯ ಜೊತೆ ವಾಗ್ವಾದ ನಡೆಸುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘‘ ನೀವು ಕೊಂದಿರುವಂತಹ ಜನರಿಗಿಂತ ನಾನೇನೂ ದೊಡ್ಡವಳಲ್ಲ, ನೀವು ನನ್ನನ್ನ ತಡೆದಿರುವುದಕ್ಕೆ ಕಾನೂನುಬದ್ಧ ವಾರಂಟ್ ಇಲ್ಲವೇ ಕಾನೂನಾತ್ಮಕ ಆದೇಶವನ್ನು ತೋರಿಸಿ. ಇಲ್ಲದೆ ಇದ್ದಲ್ಲಿ ನಾನು ಇಲ್ಲಿಂದ ಕದಲಲಾರೆ ’’ಎಂದು ಪ್ರಿಯಾಂಕಾ ಹಿಂದಿಯಲ್ಲಿ ವಾದಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಬಿಜೆಪಿ ಸರಕಾರವು ಪ್ರಿಯಾಂಕಾ ವಾದ್ರಾ ಅವರಿಗೆ ಕಾನೂನು ನೆರವು ಪಡೆಯಲು ಅವಕಾಶ ನಿರಾಕರಿಸಿದೆಯೆದಂು ಕೆಲವು ಹಿರಿಯ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಪ್ರಿಯಾಂಕಾ ಅವರ ಬಂಧನವು ಕಾನೂನುಬಾಹಿರವಾಗಿದ್ದು, ಆಕೆಯನ್ನು ಸೂರ್ಯೋದಯಕ್ಕೆ ಮೊದಲೇ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆಂದು ಅವರು ಆಪಾದಿಸಿದ್ದಾರೆ. ಪಕ್ಷದ ನಾಯಕರಾದ ಸಲ್ಮಾನ್ ಖುರ್ಷಿದ್, ಪ್ರಮೋದ್ ತಿವಾರಿ ಹಾಗೂ ಇಮಾರನ್ ಮಸೂದ್ ಕೂಡಾ ವಾದ್ರಾ ಅವರನ್ನು ತಕ್ಷಣವೇ ಬಿಡುಗಡೆಗಳಿಸಬೇಕೆಂದು ಉ.ಪ್ರ. ಸರಕಾರವನ್ನು ಆಗ್ರಹಿಸಿದ್ದಾರೆ.
ಪಂಜಾಬ್ ನ ನೂತನ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಕೂಡಾ ಲಖೀಂಪುರ ಖೇರಿಗೆ ಭೇಟಿ ನೀಡಲು ತೆರಳಿದ್ದರು. ಆದರೆ ಉತ್ತರಪ್ರದೇಶ ಸರಕಾರವು ಅವರಿಗೆ ಅನುಮತಿಯನ್ನು ನಿರಾಕರಿಸಿದೆಯೆಂದು ತಿಳಿದುಬಂದಿದೆ.ಪಂಜಾಬ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಕೂಡಾ ಘಟನಾ ಸ್ಥಳಕ್ಕೆ ತಲುಪಲು ಪ್ರಯತ್ನಿಸಿದ್ದರಾದರೂ ಅವರನ್ನು ದಾರಿ ಮಧ್ಯೆ ವಶಕ್ಕೆ ತೆಗೆದುಕೊಳ್ಳಲಾಯಿತು. ಆನಂತರ ಸಿಧು ಹಾಗೂ ಪಂಜಾಬ್ನ ಇತರ ಕಾಂಗ್ರೆಸ್ ನಾಯಕರು ತಮಗೆ ಲಖೀಂಪುರ ಖೇರಿಗೆ ಭೇಟಿ ನೀಡಲು ಅನುಮತಿ ನೀಡಬೇಕೆಂದು ಆಗ್ರಹಿಸಿ ಧರಣಿ ನಡೆಸಿದರು.
ಈ ಮಧ್ಯೆ ಸಮಾಜವಾದಿ ಪಕ್ಷ ನಾಯಕ ಹಾಗೂ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ಯಾದವ್ ರೈತರನ್ನು ಬಿಜೆಪಿ ಸರಕಾರ ದಮಿಸುತ್ತಿದೆ ಎಂದು ಕಿಡಿಕಾರಿದ್ದಾರೆ ಹಾಗೂ ಮುಖ್ಯಮಂತ್ರಿ ಸ್ಥಾನಕ್ಕೆ ಆದಿತ್ಯನಾಥ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಘಟಿನೆ ನಡೆದ ಸ್ಥಳವನ್ನು ತಲುಪಲು ಅಥವಾ ಮೃತರ ಕುಟುಂಬಗಳನ್ನು ಭೇಟಿಯಾಗಲು ಯತ್ನಿಸಿದ ಅವರನ್ನು ಪೊಲೀಸರು ದಾರಿ ಮಧ್ಯೆ ತಡೆದಿದ್ದು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಬಹುಜನ ಸಮಾಜವಾದಿ ಪಕ್ಷದ ಅಧ್ಯಕ್ಷೆ ಮಾಯಾವತಿ ಅವರು ಲಖೀಂಪುರ ಖೇರಿ ಹಿಂಸಾಚಾರದ ಬಗ್ಗೆ ನ್ಯಾಯಾಂಗ ತನಿಖೆಗೆ ನಡೆಯಬೇಕೆಂದು ಆಗ್ರಹಿಸಿದ್ದಾರೆ. ‘‘ ಬಿಎಸ್ಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸಂಸದ ಎಸ್.ಸಿ.ಮಿಶ್ರಾ ಅವರನ್ನು ರವಿವಾರ ರಾತ್ರಿ, ಲಕ್ನೋದಲ್ಲಿರುವ ಅವರ ನಿವಾಸದಲ್ಲಿ ಗೃಹಬಂಧನದಲ್ಲಿರಿಸಲಾಗಿದೆ. ರೈತರ ಹತ್ಯೆಯ ಘಟನೆಯ ಬಗ್ಗೆ ನಿಖರವಾದ ವರದಿಯನ್ನು ಪಡೆಯಲು ಅವರ ನೇತೃತ್ವದ ಬಿಎಸ್ಪಿ ನಿಯೋಗಕ್ಕೆ ಲಖೀಂಪುರ ಕೇರಿಗೆ ತೆರಳಲು ಸಾಧ್ಯವಾಗಿಲ್ಲ ಎಂದು ಮಾಯಾವತಿ ಸೋಮವಾರ ಟ್ವೀಟ್ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಇಬ್ಬರು ಬಿದೆಪಿ ಸಚಿವರು ಶಾಮೀಲಾಗಿರುವುದರಿಂದ ಘಟನೆಗೆ ಯ ಬಗ್ಗೆ ಸರಕಾರದಿಂದ ಸಮರ್ಪಕ ತನಿಖೆ ನಡೆಸಲು ಹಾಗೂ ಮೃತಪಟ್ಟವರಿಗೆ ನ್ಯಾಯ ಒದಗಿಸಲು ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವುದು ಸಾಧ್ಯವೆಂದು ಅನಿಸುತ್ತಿಲ್ಲ ಎಂದವರು ಟ್ವೀಟ್ ಮಾಡಿದ್ದಾರೆ. ಈವರೆಗೆ 8ಮಂದಿ ಮೃತರಾಗಿರುವುದು ದೃಢಪಟ್ಟಂತಹ ಈ ಘಟನೆಯ ಬಗ್ಗೆ ನಾಯಾಂಗ ತನಿಖೆಯಾಗಬೇಕೆಂದು ಬಿಎಸ್ಪಿ ಆಗ್ರಹಿಸುತ್ತದೆ ಎಂದವರು ಹೇಳಿದ್ದಾರೆ.
ಚತ್ತೀಸ್ಗಢದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಭೂಪೇಶ್ ಭೇಲ್, ಬಿಎಸ್ಪಿಯ ಎಸ್.ಸಿ.ಮಿಶ್ರಾ ಹಾಗೂ ಆಪ್ ಪಕ್ಷದ ಸಂಜಯ್ ಸಿಂಗ್ ಅವರನ್ನು ಕೂಡಾ ಪೊಲೀಸರು ರೈತರು ಸಾವನ್ನಪ್ಪಿದ ಸ್ಥಳವನ್ನು ಸಂದರ್ಶಿಸಲು ಅನುಮತಿ ನೀಡಿಲ್ಲವೆಂದು ತಿಳಿದುಬಂದಿದೆ. ಈ ಮಧ್ಯೆ ಲಖೀಂಪುರ ಖೇರಿಗೆ ಭೇಟಿ ನೀಡಲು ತೆರಳುತ್ತಿರುವ ಪ್ರತಿಪಕ್ಷ ನಾಯಕರನ್ನು ಬಿಜೆಪಿ ಸರಕಾರವು ತಡೆಯುತ್ತಿರುವುದನ್ನು ಖಂಡಿಸಿ ಸಿಪಿಎಂ ಪಕ್ಷವ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯಚೂರಿ ಟ್ವೀಟ್ ಮಾಡಿದ್ದಾರೆ.‘‘ನಮ್ಮ ಶೂರ ಹಾಗೂ ದೃಢಸಂಕಲ್ಪದ ರೈತರ ಬಲಿದಾನವು ವ್ಯರ್ಥವಾಗದು. ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದದವರಿಗೆ ನಮ್ಮ ಗೌರವನಮನಗಳು’’ ಎಂದು ಯಚೂರಿ ಟ್ವಿಟ್ಟರ್ ನಲ್ಲಿ ಶ್ರದ್ದಾಂಜಲಿ ಸಮರ್ಪಿಸಿದ್ದಾರೆ.
आखिरकार वही हुआ, जिसकी BJP से उम्मीद थी
— Srinivas BV (@srinivasiyc) October 4, 2021
'महात्मा गांधी' के लोकतांत्रिक देश में 'गोडसे' के उपासकों ने भारी बारिश और पुलिसबल से संघर्ष करते हुए अन्नदाताओं से मिलने जा रही हमारी नेता @priyankagandhi जी को हरगांव से गिरफ्तार किया..
ये लड़ाई का सिर्फ आरंभ है!! किसान एकता जिंदाबाद pic.twitter.com/vehKIxh87B







