ಸ್ವಾವಲಂಬನೆಯೊಂದಿಗೆ ಸ್ವಾಭಿಮಾನದಿಂದ ಬದುಕಿರಿ: ಸಚಿವ ನಾರಾಯಣಸ್ವಾಮಿ
'ಅಂತ್ಯೋದಯ' ಮಾಹಿತಿ ಕಾರ್ಯಾಗಾರ ಉದ್ಘಾಟನೆ

ಬಂಟ್ವಾಳ, ಅ.4: ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಗಳು ಏನೇನು ಅಂತ ಪ್ರತಿಯೊಬ್ಬರು ತಿಳಿದುಕೊಂಡು ಸ್ವಾವಲಂಬಿಗಳಾಗಲು ಪ್ರಯತ್ನಿಸಬೇಕು ಮತ್ತು ಸ್ವಾಭಿಮಾನದಿಂದ ಬದುಕಲು ಮುಂದಾಗಬೇಕು ಎಂದು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆಯ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದ್ದಾರೆ.
ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ದ.ಕ. ಜಿಲ್ಲಾಡಳಿತ ಹಾಗೂ ಜಿಪಂ ಸಂಯುಕ್ತಾಶ್ರಯದಲ್ಲಿ ಬಂಟರ ಭವನದಲ್ಲಿ ಆಯೋಜಿಸಿದ್ದ ಇಲಾಖೆಗಳ ವಿವಿಧ ಯೋಜನೆಗಳ ಕುರಿತು ಮಾಹಿತಿ ಕಾರ್ಯಾಗಾರ 'ಅಂತ್ಯೋದಯ'ವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಮಾಜದಲ್ಲಿ ಇಂದು ಜೈಕಾರ ಮತ್ತು ಧಿಕ್ಕಾರ ಕೂಗುವ ಪರಿಪಾಠ ಇದೆ. ಆದರೆ ಸಮಸ್ಯೆಗಳಿಗೆ ಪರಿಹಾರವೇ ಸಿಗುತ್ತಿಲ್ಲ. ಇದು ಸರಿಯಲ್ಲ. ಧಿಕ್ಕಾರ ಮತ್ತು ಜೈಕಾರ ಕೂಗುವ ಮೊದಲು ವಾಸ್ತವ ಏನೂಂತ ತಿಳಿದುಕೊಳ್ಳಬೇಕಿದೆ ಎಂದು ಸಚಿವ ಎ. ನಾರಾಯಣ ಸ್ವಾಮಿ ನುಡಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕರ್ನಾಟಕದಲ್ಲಿ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಇಲಾಖೆಯು ಮುಂದಾಗಿದ್ದು, ಸ್ಥಳೀಯಾಡಳಿತ ಸಹಿತ ಎಲ್ಲಾ ಜನಪ್ರತಿನಿಧಿಗಳು ಇದಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಶಾಸಕ ರಾಜೇಶ್ ನಾಯ್ಕ್ ಯು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಂಸದ ನಳಿನ್ ಕುಮಾರ್ ಕಟೀಲು, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಶಾಸಕರಾದ ಯು.ಟಿ.ಖಾದರ್, ಡಾ. ಭರತ್ ಶೆಟ್ಡಿ, ಹರೀಶ್ ಪೂಂಜಾ, ಸಂಜೀವ ಮಠಂದೂರು, ಪ್ರತಾಪ ಸಿಂಹ ನಾಯಕ್ ಕೆ., ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ದಿ ಮೈಸೂರು ಇಲೆಕ್ಟ್ರಿಕ್ ಇಂಡಸ್ಟ್ರೀಸ್ ಲಿ. ಅಧ್ಯಕ್ಷ ಸಂತೋಷ್ ರೈ ಬೋಳಿಯಾರು, ಅಲೆಮಾರಿ,ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ತುಂಬೆ ಗ್ರಾಪಂ ಅಧ್ಯಕ್ಷ ಪ್ರವೀಣ್ ಬಿ. ತುಂಬೆ, ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ದ.ಕ. ಜಿಪಂ ಸಿಇಒ ಡಾ. ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.






.gif)
.gif)
.gif)
.gif)

