ತನ್ನನ್ನು ಬಂಧಿಸಿಟ್ಟಿದ್ದ ಕೊಠಡಿಯನ್ನು ಸ್ವತಃ ಶುಚಿಗೊಳಿಸಿದ ಪ್ರಿಯಾಂಕಾ ಗಾಂಧಿ: ವೀಡಿಯೊ ವೈರಲ್

ಸೀತಾಪುರ: ಹಿಂಸಾಚಾರಪೀಡಿತ ಉತ್ತರಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಗೆ ತೆರಳುತ್ತಿದ್ದ ವೇಳೆ ರವಿವಾರ ರಾತ್ರಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ನಿರ್ಬಂಧಿಸಲಾಗಿತ್ತು ಮತ್ತು ಲಕ್ನೋದಿಂದ ಸುಮಾರು ೯೦ಕಿ.ಮೀ ದೂರದ ಸೀತಾಪುರದಲ್ಲಿ ಅವರನ್ನು ಬಂಧನಕ್ಕೊಳಪಡಿಸಲಾಗಿತ್ತು. ಬಂಧನದ ವೇಳೆ ಪೊಲೀಸರೊಂದಿಗೆ ನಡೆಸಿದ ಮಾತಿನ ಚಕಮಕಿಯ ವೀಡಿಯೊ ಬಿಡುಗಡೆ ಮಾಡಿದ ಬಳಿಕ ಇದೀಗ ಪ್ರಿಯಾಂಕಾ ಗಾಂಧಿಯನ್ನು ಬಂಧನದಲ್ಲಿಟ್ಟ ಕೊಠಡಿಯನ್ನು ಅವರೇ ಸ್ವಚ್ಛಗೊಳಿಸುತ್ತಿರುವ ವೀಡಿಯೊ ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ.
ರವಿವಾರ ಲಖೀಂಪುರ್ ಖೇರಿಯಲ್ಲಿ ನಡೆದಿದ್ದ ಹಿಂಸಾಚಾರದ ಬಳಿಕ ರೈತ ಕುಟುಂಬಗಳನ್ನು ಭೇಟಿ ಮಾಡುವ ಸಲುವಾಗಿ ಪ್ರಿಯಾಂಕಾ ಗಾಂಧಿ ಲಖೀಂಪುರ್ ಖೇರಿಗೆ ತೆರಳುತ್ತಿದ್ದಾಗ ಪೊಲೀಸರು ಅವರನ್ನು ಬಂಧನಕ್ಕೊಳಪಡಿಸಿದ್ದರು.
ಅವರನ್ನು ಪಿಎಸಿ ಅತಿಥಿಗೃಹದಲ್ಲಿ ಬಂಧನಕ್ಕೊಳಪಡಿಸಲಾಗಿದ್ದು, ಅತಿಥಿಗೃಹದ ಕೊಠಡಿಯ ನೆಲ ಗುಡಿಸುತ್ತಿರುವ ವೀಡಿಯೊ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಬಳಿಕ ಅವರು ಉಪವಾಸ ಆರಂಭಿಸಿದ್ದಾರೆ ಎಂದು ವರದಿ ತಿಳಿಸಿದೆ. "ಅವರು ತಂಗಿದ್ದ ಕೊಠಡಿ ಶುಚಿಯಾಗಿರಲಿಲ್ಲ. ಅವರೇ ಕೊಠಡಿ ಶುಚಿಗೊಳಿಸಿದರು" ಎಂದು ಅವರ ಜೊತೆಗಿದ್ದವರು ಎನ್ಡಿಟಿವಿಗೆ ತಿಳಿಸಿದ್ದಾಗಿ ವರದಿ ಉಲ್ಲೇಖಿಸಿದೆ.
ಪ್ರಿಯಾಂಕಾ ಬಂಧನ ವಿರೋಧಿಸಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರದ ಹೊರಗಡೆ ಜಮಾಯಿಸಿದ್ದರು.
Guess who where why pic.twitter.com/kmHW3B4UE5 Priyanka under detention in PAC guest house
— DINESH TRIVEDI (@trivedidn) October 4, 2021