ತ್ರಿಪುರಾದಲ್ಲಿ ಮಾಧ್ಯಮ ಕಚೇರಿಗಳ ಮೇಲೆ ದಾಳಿ ಪ್ರಕರಣ: ಬಿಜೆಪಿ ಯುವಮೋರ್ಚಾ ನಾಯಕನ ಬಂಧನ

Photo: Twitter@cpimspeak
ಅಗರ್ತಲಾ,ಅ.4: ಇಲ್ಲಿಯ ಮಾಧ್ಯಮ ಸಂಸ್ಥೆಗಳ ಮೇಲೆ ಸೆ.8ರಂದು ದಾಳಿ ನಡೆಸಿದ್ದಕ್ಕಾಗಿ ಬಿಜೆಪಿ ಯುವಮೋರ್ಚಾದ ನಾಯಕನೋರ್ವನನ್ನು ಪೊಲೀಸರು ರವಿವಾರ ಬಂಧಿಸಿದ್ದಾರೆ.
ಬಂಧಿತ ರಘು ಲೋಧ್ ಬಿಜೆಪಿ ಯುವಮೋರ್ಚಾ ರಾಜ್ಯ ಸಹವಕ್ತಾರರಾಗಿದ್ದು,ಸ್ಥಳೀಯ ನ್ಯಾಯಾಲಯವು ಅ.5ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.
ಪ್ರತಿಬಾದಿ ಕಲಮ್ ವೃತ್ತಪತ್ರಿಕೆಯ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ ಆರೋಪವನ್ನು ಲೋಧ್ ಎದುರಿಸುತ್ತಿದ್ದು,ರಾಜಕೀಯ ಪಕ್ಷವೊಂದರ ಕಚೇರಿಯಲ್ಲಿ ದಾಂಧಲೆ ನಡೆಸಿ,ವಾಹನವನ್ನು ಸುಟ್ಟು ಹಾಕಿದ್ದಕ್ಕಾಗಿ ಪ್ರತ್ಯೇಕ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.
ಸೆ.8ರಂದು ಬಿಜೆಪಿ ಕಾರ್ಯಕರ್ತರು ಪ್ರತಿಬಾದಿ ಕಲಮ್ ಸೇರಿದಂತೆ ಮೂರು ಮಾಧ್ಯಮ ಸಂಸ್ಥೆಗಳ ಕಚೇರಿಗಳು ಮತ್ತು ಸಿಪಿಎಮ್ನ ಮೂರು ಕಚೇರಿಗಳ ಮೇಲೆ ದಾಳಿಗಳನ್ನು ನಡೆಸಿದ ಬಳಿಕ ತ್ರಿಪುರಾದ ವಿವಿಧೆಡೆಗಳಲ್ಲಿ ಹಿಂಸಾಚಾರಗಳು ಭುಗಿಲೆದ್ದಿದ್ದವು. 10ಕ್ಕೂ ಅಧಿಕ ಜನರು ಗಾಯಗೊಂಡಿದ್ದು,ಆರು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು.
ಸೆ.6ರಂದು ತ್ರಿಪುರಾದ ಧನಪುರ ಮತ್ತು ಬಾಷ್ಪುಕರ್ ಗ್ರಾಮಗಳಲ್ಲಿ ಘರ್ಷಣೆಗಳ ವೇಳೆ ತನ್ನ ಕಾಯಕರ್ತರ ಮೇಲೆ ನಡೆದಿದ್ದ ದಾಳಿಯನ್ನು ಪ್ರತಿಭಟಿಸಿ ಆಡಳಿತ ಬಿಜೆಪಿಯು ಸೆ.8ರಂದು ಅಗರ್ತಲಾದಲ್ಲಿ ರ್ಯಾಲಿಯೊಂದನ್ನು ಆಯೋಜಿಸಿದ್ದು,ಇದೇ ಸಂದರ್ಭದಲ್ಲಿ ಈ ದಾಳಿಗಳು ನಡೆದಿದ್ದವು.