ಮೇಕೆದಾಟು ಯೋಜನೆ; ಸರಕಾರಕ್ಕೆ ಒಂದು ತಿಂಗಳ ಗಡುವು ನೀಡಿದ ಡಿ.ಕೆ.ಶಿವಕುಮಾರ್

ಬೆಂಗಳೂರು, ಅ. 4: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಹಿಂದೆ ನೀರಾವರಿ ಸಚಿವರಾಗಿದ್ದವರು. ಅದಕ್ಕೆ ಸಂಬಂಧಿಸಿದ ಕಾನೂನು ಬಲ್ಲವರು. ಮೇಕೆದಾಟು ಯೋಜನೆಗೆ ಅಡ್ಡಿಪಡಿಸಲು ತಮಿಳುನಾಡಿಗೆ ಹಕ್ಕಿಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೇ ನಾವು ಇಷ್ಟುದಿನಗಳಿಂದ ಹೇಳುತ್ತಾ ಬಂದಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೀವು ಮುಖ್ಯಮಂತ್ರಿ ಆದಾಗಿನಿಂದ ಈ ನಿಟ್ಟಿನಲ್ಲಿ ಯಾವುದೇ ಕೈಗೊಂಡಿಲ್ಲ, ಯಾಕೆ? ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿ ಕೂತಿರುವ ನೀವು ಕೃಷ್ಣ, ಮಹಾದಾಯಿ ಯೋಜನೆ ಕಾರ್ಯಾರಂಭ ಮಾಡಲು ಸಾಧ್ಯವಾಗುತ್ತಿಲ್ಲ, ಯಾಕೆ? ಎಂದು ಪ್ರಶ್ನಿಸಿದರು.
ಕೃಷ್ಣ ವಿಚಾರದಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ. ಮೇಕೆದಾಟು ವಿಚಾರದಲ್ಲಿ ತಮಿಳುನಾಡಿನ ನೀರು, ಜಮೀನು, ಹಣ ಯಾವುದೂ ಬೇಕಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಡಬಲ್ ಇಂಜಿನ್ ಸರಕಾರ ಇದೆ. ಕಾನೂನು ವ್ಯಾಪ್ತಿಯಲ್ಲಿ ಕೆಲಸ ಆರಂಭಿಸಬೇಡಿ ಎಂದು ನಾವ್ಯಾರೂ ಹೇಳಿಲ್ಲ. ಈ ಯೋಜನೆಗೆ ಬೇಕಾದ ಎಲ್ಲ ಅನುಮತಿ ತೆಗೆದುಕೊಂಡು, ಕಾರ್ಯರೂಪಕ್ಕೆ ತರಲು ಸಾಧ್ಯವಾಗುತ್ತಿಲ್ಲ ಯಾಕೆ? ಎಂದು ಶಿವಕುಮಾರ್ ಪ್ರಶ್ನಿಸಿದರು.
ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೀರಾವರಿ ವಿಚಾರಗಳು ಹಾಗೂ ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಮೇಕೆದಾಟು ಯೋಜನೆಗಳ ಕಾಮಗಾರಿ ಆರಂಭಿಸಲು ಬೇಕಾದ ಕಾರ್ಯಕ್ರಮ ರೂಪಿಸಲು ಸರಕಾರಕ್ಕೆ 1 ತಿಂಗಳ ಗಡುವು ನೀಡುತ್ತೇವೆ. ಅಷ್ಟರಲ್ಲಿ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಿ ಎಂದು ಶಿವಕುಮಾರ್ ಹೇಳಿದರು.
ಸರಕಾರ ನೀರಾವರಿ ಹಾಗೂ ಕುಡಿಯುವ ನೀರಿನ ವಿಚಾರದಲ್ಲಿ ವಿಳಂಬ ನೀತಿ ನಿಲ್ಲಿಸಿ, ಯೋಜನೆಗಳ ಕಾಮಗಾರಿ ಆರಂಭಿಸದಿದ್ದರೆ ನಾವು ಮುಂದಿನ ಹೋರಾಟ ನಡೆಸುತ್ತೇವೆ. ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ಯಾವ ರೀತಿ ಇರಲಿದೆ ಎಂದು ಮುಂದೆ ತಿಳಿಸುತ್ತೇವೆ ಎಂದು ಅವರು ತಿಳಿಸಿದರು.
ಇತ್ತೀಚೆಗೆ ಪ್ರತಿಭಟನೆಗೆ ಮುಂದಾದ ರೈತರನ್ನು ಮಾರ್ಗಮಧ್ಯದಲ್ಲೇ ತಡೆಹಿಡಿಯಲಾಗಿದೆ. ಅವರನ್ನು ತಡೆ ಹಿಡಿದಿದ್ದು ಏಕೆ? ಅವರು ಯಾವ ಅಪರಾಧ ಮಾಡಿದ್ದರು? ಪ್ರತಿಭಟನೆ ಮಾಡುವುದಾಗಿ ಮುಂಚಿತವಾಗಿ ಮಾಹಿತಿ ನೀಡಿದ್ದರೂ ಅವರನ್ನು ತಡೆದು, ಅವರ ಧ್ವನಿ ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ. ಈ ವಿಚಾರವಾಗಿಯೂ ನಮ್ಮ ಮುಂದಿನ ಹೆಜ್ಜೆ ಬಗ್ಗೆ ಚರ್ಚಿಸುತ್ತೇವೆ ಎಂದು ಶಿವಕುಮಾರ್ ಹೇಳಿದರು.
ಸರಕಾರವೇ ಇಲ್ಲದ ಪರಿಸ್ಥಿತಿ: ರಾಜಧಾನಿಯಲ್ಲಿ ಧಾರಾಕಾರ ಮಳೆ ಬಿದ್ದು ಮನೆಗಳಿಗೆ ನೀರು ನುಗ್ಗಿದ್ದರೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜ್ಯದಲ್ಲಿ ಸರಕಾರವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರಿಗೂ ಹೊಣೆಗಾರಿಕೆ ಇಲ್ಲವಾಗಿದೆ. ಹೇಳುವವರು, ಕೇಳುವವರು ಇಲ್ಲವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿನ್ನೆ ಸರಕಾರದ ಕಾರ್ಯಕ್ರಮವನ್ನು ಪಕ್ಷದ ಕಾರ್ಯಕ್ರಮದಂತೆ ಮಾಡಿದ್ದಾರೆ. ರಾಜ್ಯಕ್ಕೆ ಸಂಬಂಧಪಡದ ಜೆ.ಪಿ.ನಡ್ಡಾ ಅವರ ಫೋಟೋ ಹಾಕಿಕೊಂಡು ಕಾರ್ಯಕ್ರಮ ಮಾಡಿದ್ದು, ರಾಜ್ಯದಲ್ಲಿರುವ ಮುಖ್ಯಕಾರ್ಯದರ್ಶಿ, ಅಧಿಕಾರಿಗಳು, ಆಯುಕ್ತರಿಗೆ ಸಾಮಾನ್ಯ ಪರಿಜ್ಞಾನವೇ ಇಲ್ಲದಂತಾಗಿದೆ. ಇದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ. ಇದರ ವಿರುದ್ಧವೂ ನಾವು ಧ್ವನಿ ಎತ್ತುತ್ತೇವೆ ಎಂದು ಶಿವಕುಮಾರ್ ಹೇಳಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಧೃವನಾರಾಯಣ್, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಪ್ರದೇಶ ಕಾಂಗ್ರೆಸ್ ರೈತ ಘಟಕದ ಅಧ್ಯಕ್ಷ ಸಚಿನ್ ಮಿಗಾ ಉಪಸ್ಥಿತರಿದ್ದರು.







