ಹಿರಿಯಡ್ಕ: ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ

ಹಿರಿಯಡ್ಕ, ಅ.4: ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನಾಚರಣೆಯ ಅಂಗವಾಗಿ ಸೇವೆ ಮತ್ತು ಸಮರ್ಪಣ ಅಭಿಯಾನದಡಿ ಉಡುಪಿ ಜಿಲ್ಲಾ ಬಿಜೆಪಿ, ಬಿಜೆಪಿ ವೈದ್ಯಕೀಯ ಪ್ರಕೋಷ್ಠ, ಅಮೋಘ ಹಿರಿಯಡ್ಕ, ವೈದ್ಯಕೀಯ ಪ್ರತಿನಿಧಿಗಳ ಸಂಘ ಉಡುಪಿ ಇವುಗಳ ಸಹಯೋಗದೊಂದಿಗೆ ಮಣಿಪಾಲ ಕೆಎಂಸಿಯ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ರವಿವಾರ ಹಿರಿಯಡ್ಕ ದೇವಾಡಿಗರ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಶಿಬಿರವನ್ನು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಉದ್ಘಾಟಿಸಿ ದರು. ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ರಾಷ್ಟ್ರೀಯ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ.ಸುವರ್ಣ, ಉಡುಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ.ರಾಮಚಂದ್ರ ಕಾಮತ್ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿಗೆ 71ನೇ ಹುಟ್ಟುಹಬ್ಬದ ಶುಭಾಶಯ ಮತ್ತು ಜನಪರ ಯೋಜನೆಗಳನ್ನು ಪ್ರಶಂಸಿಸಿ ಅಂಚೆ ಕಾರ್ಡ್ ಬರೆಯುವ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಕೆಎಂಸಿಯ ಮೋಹನ್ ಶೆಟ್ಟಿ, ಬಿಜೆಪಿ ಮುಖಂಡರಾದ ದಿನಕರ ಬಾಬು, ಡಾ.ವಿದ್ಯಾಧರ ಶೆಟ್ಟಿ ಕೆ., ಪೂರ್ಣಿಮಾ ಸುರೇಶ್ ನಾಯಕ್, ಶ್ರೀಕಾಂತ್ ನಾಯಕ್, ಪ್ರಸಾದ್ ಕುಮಾರ್, ಅನಿಲ್ ಶೆಟ್ಟಿ ಮಾಂಬೆಟ್ಟು, ಗೋಪಾಲಕೃಷ್ಣ ರಾವ್ ಉಪಸ್ಥಿತರಿದ್ದರು. ಸತ್ಯಾನಂದ ನಾಯಕ್ ಸ್ವಾಗತಿಸಿದರು.
ವೀಣಾ ಎಸ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪೆರ್ಡೂರು ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಜಿಯಾನಂದ ಹೆಗ್ಡೆ ವಂದಿಸಿದರು. ಶಿಬಿರದ 11 ವಿವಿಧ ಸೇವಾ ವಿಭಾಗಗಳಲ್ಲಿ 450ಕ್ಕೂ ಮಿಕ್ಕಿ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಲಾಯಿತು. ಲಸಿಕೆ ವಿತರಣಾ ಕೇಂದ್ರದಲ್ಲಿ 98 ಮಂದಿ ಲಸಿಕೆ ಪಡೆದರು. ಪ್ರಧಾನ ಮಂತ್ರಿ ಜನೌಷಧಿ ಕೇಂದ್ರದ ಕೌಂಟರ್ ಮೂಲಕ ಅಪೇಕ್ಷಿತರಿಗೆ ಉಚಿತ ಔಷಧಿಯನ್ನು ವಿತರಿಸಲಾಯಿತು.







