ಪೂರ್ಣಪ್ರಜ್ಞ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ

ಉಡುಪಿ : ಶ್ರೀವಿಬುಧೇಶತೀರ್ಥ ಸ್ವಾಮೀಜಿ ಘನ ವಿದ್ವಾಂಸ ಯತಿಗಳಾಗಿದ್ದುಕೊಂಡು, ಸಮಾಜದ ಅಗತ್ಯತೆಯನ್ನು ಮನಗಂಡು ದೇಶದಾದ್ಯಂತ ಮಾದರಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಲಕ್ಷಾಂತರ ಕುಟುಂಬವನ್ನು ಬೆಳಗಿಸಿ ದ್ದಾರೆ. ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ ಅಹರ್ನಿಶಿ ಶ್ರಮಿಸಿದ ಸ್ವಾಮೀಜಿಗಳ ಕೃತುಶಕ್ತಿ ಅನ್ಯಾದೃಶವಾದುದಾಗಿದೆ ಎಂದು ಅದಮಾರು ಹಿರಿಯ ಮಠಾಧೀಶ ಶ್ರೀವಿಶ್ವಪ್ರಿಯತೀರ್ಥ ಸ್ವಾಮೀಜಿ ಹೇಳಿದ್ದಾರೆ.
ರವಿವಾರ ನಡೆದ ಪೂರ್ಣಪ್ರಜ್ಞ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಅನುಗ್ರಹ ಸಂದೇಶ ನೀಡಿದರು.
ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ ಪೂಜಾ ಕಾಮತ್ ವಿವಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಬಹುಮಾನವಾಗಿ ಬಂದ 10ಸಾವಿರ ರೂ. ಮೊತ್ತವನ್ನು ಸಂಘಕ್ಕೆ ನೀಡಿದರು. ಪೂಜಾ ಕಾಮತ್ ಹಾಗೂ ಚಾಣಕ್ಯ ಪ್ರಶಸ್ತಿ ಗಳಿಸಿದ ಹಳೆವಿದ್ಯಾರ್ಥಿ ನಾಗರಾಜ್ ಹೆಬ್ಬಾರ್ ಅವರನ್ನು ಗೌರವಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ಎ.ರಾಘವೇಂದ್ರ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಡಾ.ಬಿ.ಎಂ.ಸೋಮಯಾಜಿ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಮಂಜುನಾಥ, ಕಾರ್ಯದರ್ಶಿ ಮುರಲಿ ಕಡೆಕಾರ್, ಕೋಶಾಧಿಕಾರಿ ಸೌಮ್ಯ ಶೆಟ್ಟಿ ಕ್ರಮವಾಗಿ ಗತ ಸಭೆ ವರದಿ, ವಾರ್ಷಿಕ ವರದಿ, ಲೆಕ್ಕಪತ್ರ ಮಂಡಿಸಿದರು. ಜೊತೆಕಾರ್ಯದರ್ಶಿ ತೇಜಸ್ವಿ ಶಂಕರ್ ವಂದಿಸಿದರು.





