ಬೆಂಗಳೂರು; ರೈತರ ಹತ್ಯೆ ಖಂಡಿಸಿ ಪಂಜಿನ ಮೆರವಣಿಗೆ: ರಾಜ್ಯ ವ್ಯಾಪಿ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆಗೆ ಕರೆ

ಬೆಂಗಳೂರು, ಅ.4: ಉತ್ತರ ಪ್ರದೇಶದಲ್ಲಿ ರೈತರ ಹತ್ಯೆ ಹಾಗೂ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಹೊರಟಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಬಂಧನ ಖಂಡಿಸಿ ಬೃಹತ್ ಪಂಜಿನ ಮೆರವಣಿಗೆ ನಡೆಸಿದ ಕಾಂಗ್ರೆಸ್ ನಾಯಕರು, ಇಂದು ಮತ್ತು ಬುಧವಾರ(ಅ.5) ರಾಜ್ಯ ವ್ಯಾಪಿ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಕರೆ ನೀಡಿದ್ದಾರೆ.
ಸೋಮವಾರ ಇಲ್ಲಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಮುಂಭಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ರಾಜಭವನದ ವರೆಗೂ ಪಂಜಿನ ಮೆರವಣಿಗೆ ನಡೆಸಿ, ಕೇಂದ್ರ ಹಾಗೂ ಯುಪಿ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ರಾಜಭವನ ಪ್ರವೇಶಕ್ಕೂ ಮುನ್ನ ಪ್ರತಿಭಟನಾಕಾರರನ್ನು ತಡೆದ ಪೊಲೀಸರು, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಧ್ರುವನಾರಾಯಣ್, ಶಾಸಕ ರಿಝ್ವಾನ್ ಆರ್ಶದ್ ಸೇರಿದಂತೆ ಹಲವು ನಾಯಕರನ್ನು ವಶಕ್ಕೆ ಪಡೆದು, ವಾಹನದಲ್ಲಿ ಕರೆದೊಯ್ದರು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ರೈತರ ಮೇಲಿನ ದೌರ್ಜನ್ಯ ಖಂಡಿಸಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿನ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಇಂದು ಮತ್ತು ಬುಧವಾರ ಜಿಲ್ಲೆಗಳಲ್ಲಿಯೇ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಬೇಕು. ಆನಂತರ ತಮ್ಮ ಮನವಿ ಪತ್ರ ಸಲ್ಲಿಸಬೇಕೆಂದು ಕರೆ ನೀಡಲಾಗಿದೆ ಎಂದರು.
ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು. ಜತೆಗೆ, ಸರಕಾರದ ನೀತಿಗಳನ್ನು ಖಂಡಿಸುವ ಅರ್ಹತೆ ಎಲ್ಲರಿಗೂ ಇದೆ.ಆದರೆ, ಕೇಂದ್ರ ಮತ್ತು ಉತ್ತರ ಪ್ರದೇಶದಲ್ಲಿರುವ ಬಿಜೆಪಿ ಸರಕಾರಗಳು ಕೊಲೆಗಳನ್ನು ಮಾಡುತ್ತಿರುವುದು ಖಂಡನೀಯ ಎಂದರು. ದೇಶದ ಅನ್ನದಾತರನ್ನು ನಡೆಸಿಕೊಳ್ಳುವ ರೀತಿ ಸರಿಯಲ್ಲ ಎಂದ ಅವರು, ನಮ್ಮ ಧ್ವನಿಯನ್ನು ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. ಸರಕಾರಗಳ ಪ್ರಜಾಪ್ರಭುತ್ವ ವಿರೋಧಿ ನೀತಿಗಳ ವಿರುದ್ಧ ಸದಾ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ರೈತರ ಮೇಲೆ ಕಾರು ಹರಿಸಿ ಅವರ ಸಾವಿಗೆ ಕಾರಣವಾದ ಕೇಂದ್ರ ಸಚಿವರ ರಾಜೀನಾಮೆ ಪಡೆಯಬೇಕು. ಜತೆಗೆ, ಅವರ ಪುತ್ರನನ್ನು ಬಂಧಿಸಬೇಕು. ಅದೇ ರೀತಿ, ಯಾವುದೇ ನೋಟಿಸ್ ಇಲ್ಲದೆ ನಮ್ಮ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿ, ದೌರ್ಜನ್ಯವೆಸಗಿರುವುದು ಖಂಡನೀಯ ಎಂದು ವಾಗ್ದಾಳಿ ನಡೆಸಿದರು.
ಎರಡನೆ ವಾಲಾಭಾಗ್: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಉತ್ತರ ಪ್ರದೇಶದಲ್ಲಿ ರೈತರ ಮೇಲೆ ನಡೆದಿರುವ ಅವಮಾನೀಯ ಕೃತ್ಯವೂ ಸ್ವಾತಂತ್ರ್ಯ ಪೂರ್ವದ ಜಲಿಯನ್ ವಾಲಾಭಾಗ್ ಘಟನೆಯನ್ನು ನೆನಪಿಸುವಂತೆ ಇದೆ. ಅಲ್ಲದೆ, ಅಲ್ಲಿನ ಮುಖ್ಯಮಂತ್ರಿ ಮತ್ತು ಪ್ರಧಾನಿ ನರೇಂದ್ರ ಮೋದಿ ಈ ಘಟನೆಯನ್ನು ಎರಡನೇ ಜಲಿಯನ್ ವಾಲಾ ಭಾಗ್ ಮಾಡಿದ್ದು, ಅವರು ದೇಶದ ಜನತೆ ಮುಂದೆ ಕ್ಷಮೆಯಾಚಿಸಲಿ ಎಂದು ಆಗ್ರಹಿಸಿದರು.
ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕೇಂದ್ರ ಸಚಿವರ ಪುತ್ರ ಕಾರು ಹರಿಸಿ ರೈತರ ಹತ್ಯೆಗೈದಿರುವ ಕೃತ್ಯ ಖಂಡಿಸಿ ಬೆಂಗಳೂರಿನಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪ್ರತಿಭಟನೆ ನಡೆಸಿದರು.
ಉತ್ತರ ಪ್ರದೇಶದಲ್ಲಿ ರಾಕ್ಷಸಿ ಪ್ರವೃತ್ತಿಯ ಆಡಳಿತ ನಡೆಯುತ್ತಿದ್ದು, ಇದು ಅಕ್ಷರಶಃ ಜಂಗಲ್ ರಾಜ್ ಆಗಿ ಪರಿವರ್ತನೆಯಾಗಿದೆ. ಅಲ್ಪಸಂಖ್ಯಾತರು, ದಲಿತರು,ಶೋಷಿತರ ಮೇಲೆ ನಿರಂತರ ದಾಳಿಗಳು ನಡೆಯುತ್ತಿದೆ. ಹೀಗಾಗಿ, ರಾಷ್ಟ್ರಪತಿ ಅವರು ಈ ಕೂಡಲೇ ಮಧ್ಯಪ್ರವೇಶಿಸಿ ಈ ಸರಕಾರವನ್ನು ವಜಾಗೊಳಿಸಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.








