ಉಡುಪಿ ಜಿಲ್ಲೆಯಲ್ಲಿ 6ಕ್ಕಿಳಿದ ದಿನದ ಕೋವಿಡ್ ಸೋಂಕಿತರು

ಉಡುಪಿ, ಅ.4: ಜಿಲ್ಲೆಯಲ್ಲಿ ಕೋವಿಡ್- 19 ಸೋಂಕಿತರ ಸಂಖ್ಯೆ ಸೋಮವಾರ ಕೇವಲ ಆರಕ್ಕಿಳಿದಿದೆ. ದಿನದಲ್ಲಿ ಆರು ಮಂದಿ ಮಾತ್ರ ಸೋಂಕಿ ನಿಂದ ಗುಣಮುಕ್ತರಾದರೆ, ಈಗಲೂ ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ 103ರಲ್ಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಇಂದು ಸಹ ಜಿಲ್ಲೆಯಲ್ಲಿ ಸೋಂಕಿಗೆ ಯಾರೂ ಬಲಿಯಾಗಿಲ್ಲ. ದಿನದಲ್ಲಿ ಸೋಂಕು ದೃಢಪಟ್ಟ ಆರು ಮಂದಿಯಲ್ಲಿ ನಾಲ್ವರು ಪುರುಷರು ಹಾಗೂ ಇಬ್ಬರು ಮಹಿಳೆಯರು. ಇವರಲ್ಲಿ ಮೂವರು ಉಡುಪಿ ತಾಲೂಕಿನವರು. ತಲಾ ಒಬ್ಬರು ಕುಂದಾಪುರ ಮತ್ತು ಕಾರ್ಕಳ ತಾಲೂಕಿನವರು. ಇನ್ನೊಬ್ಬರು ಹೊರಜಿಲ್ಲೆ ಯವರು. ಇವರಲ್ಲಿ ನಾಲ್ವರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಹಾಗೂ ಉಳಿದಿಬ್ಬರಿಗೆ ಮನೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು ಆರು ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ 75,807ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 809 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 76,384ಕ್ಕೇರಿದೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 11,46,314 ಮಂದಿಯನ್ನು ಕೆವಿಡ್ ಪರೀಕ್ಷೆಗೊಳಪಡಿಸಲಾಗಿದೆ.
3547 ಮಂದಿಗೆ ಲಸಿಕೆ: ಇಂದು ಜಿಲ್ಲೆಯಲ್ಲಿ ಒಟ್ಟು 3547 ಮಂದಿ ಲಸಿಕೆಯನ್ನು ಸ್ವೀಕರಿಸಿದ್ದು, ಇವರಲ್ಲಿ 845 ಮಂದಿ ಮೊದಲ ಡೋಸ್ ಹಾಗೂ 2702 ಮಂದಿ ಎರಡನೇ ಡೋಸ್ ಸ್ವೀಕರಿಸಿದ್ದಾರೆ ಎಂದು ಡಿಎಚ್‌ಓ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.
ಲಸಿಕೆ ಪಡೆದವರಲ್ಲಿ 18 ವರ್ಷದಿಂದ 44 ವರ್ಷದೊಳಗಿನ 528 ಮಂದಿ ಮೊದಲ ಡೋಸ್ ಹಾಗೂ 1698 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದರೆ, 45 ವರ್ಷ ಮೇಲಿನ 317ಮಂದಿ ಮೊದಲ ಡೋಸ್ ಹಾಗೂ 1004 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ 8,99,959 ಮಂದಿ ಮೊದಲ ಡೋಸ್ ಲಸಿಕೆಯನ್ನು ಹಾಗೂ 4,15,262 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದ್ದಾರೆ.







