ಪ್ಯಾಂಡೋರಾ ಪೇಪರ್ ವರದಿಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಆಪ್ತರ ಅಕ್ರಮ ಸಂಪತ್ತಿನ ವಿವರ ಬಹಿರಂಗ

photo: twitter.com/ImranKhanPTI
ಇಸ್ಲಮಾಬಾದ್, ಅ.4: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸರಕಾರದ ಪ್ರಮುಖ ಸದಸ್ಯರು, ಇಮ್ರಾನ್ ಪಕ್ಷಕ್ಕೆ ದೇಣಿಗೆ ನೀಡುವವರು ಹಾಗೂ ದೇಶದ ಪ್ರಭಾವಿ ಸೇನಾಧಿಕಾರಿಗಳ ಕುಟುಂಬ ಸದಸ್ಯರು ವಿದೇಶದ ಸಂಸ್ಥೆಗಳ ಮೂಲಕ ಮಿಲಿಯಾಂತರ ಡಾಲರ್ ಆಸ್ತಿ ಸಂಪಾದಿಸಿದ್ದಾರೆ ಎಂದು ತನಿಖಾ ಪತ್ರಕರ್ತರ ಅಂತರ್ರಾಷ್ಟ್ರೀಯ ಒಕ್ಕೂಟ(ಐಸಿಐಜೆ)ದ ಇತ್ತೀಚಿನ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಿದೇಶದ 14 ಹಣಕಾಸು ಸೇವಾ ಸಂಸ್ಥೆಗಳಿಂದ ಸೋರಿಕೆಯಾಗಿರುವ 11.9 ಮಿಲಿಯನ್ಗೂ ಅಧಿಕ ಗೌಪ್ಯ ಕಡತಗಳ ಮಾಹಿತಿಯನ್ನು ಆಧರಿಸಿ ನಡೆಸಿದ, ಪ್ಯಾಂಡೋರಾ ಪೇಪರ್ ಎಂದು ಕರೆಯಲಾಗುವ ತನಿಖಾ ವರದಿ ಇದಾಗಿದೆ. ಪಾಕಿಸ್ತಾನದ ‘ಭ್ರಷ್ಟ’ ರಾಜಕೀಯ ಮುಖಂಡರನ್ನು ಬಂಧಿಸುವ ಭರವಸೆಯೊಂದಿಗೆ 2018ರಲ್ಲಿ ಅಧಿಕಾರಕ್ಕೇರಿದ್ದ ಇಮ್ರಾನ್ ಖಾನ್ ಅವರ ಹೆಸರು ತನಿಖಾ ವರದಿಯಲ್ಲಿ ಸೇರಿಲ್ಲ.ವರದಿ ರವಿವಾರ ಬಿಡುಗಡೆಗೊಂಡಿದೆ.
ಇಮ್ರಾನ್ ಖಾನ್ ಸಚಿವ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿರುವ ಮೂನಿಸ್ ಇಲಾಹಿ ಮತ್ತು ವಿತ್ತ ಸಚಿವರಾಗಿರುವ ಶೌಕತ್ ತಾರಿನ್, ವಾಯುಪಡೆಯ ಮಾಜಿ ಮುಖ್ಯಸ್ಥ, ಸೇನೆಯ ಇಬ್ಬರು ಲೆಫ್ಟಿನೆಂಟ್ ಜನರಲ್ ಗಳ ಹೆಸರು ವರದಿಯಲ್ಲಿದೆ. ತಾರಿನ್ ಸಿಷೆಲ್ನಲ್ಲಿ 2014ರಲ್ಲಿ ಆರಂಭವಾದ ಟ್ರಿಪರ್ನಾ ಇನ್ಕಾರ್ಪೋರೇಶನ್ ಸಂಸ್ಥೆಯ ನಿರ್ದೇಶಕ ಹಾಗೂ ಫಲಾನುಭವಿಯಾಗಿದ್ದಾರೆ. ಅವರ ಮಾಲಕತ್ವದ ಬ್ಯಾಂಕ್ನಲ್ಲಿ ಹೂಡಿಕೆ ವ್ಯವಹಾರಕ್ಕೆ ಈ ಸಂಸ್ಥೆಯನ್ನು ಬಳಸಲಾಗಿದೆ ಎಂದು ವರದಿ ತಿಳಿಸಿದೆ. ಆದರೆ ತಾನೇನೂ ಅಕ್ರಮ ಎಸಗಿಲ್ಲ ಎಂದು ತಾರಿನ್ ಹೇಳಿದ್ದಾರೆ. ಬ್ಯಾಂಕ್ನಲ್ಲಿ ಖಾತೆ ತೆರೆದಿಲ್ಲ, ಯಾವುದೇ ವ್ಯವಹಾರ ನಡೆಸಿಲ್ಲ. ವ್ಯವಹಾರ ಆರಂಭಿಸುವುದಕ್ಕೆ ಕೆಲ ದಿನ ಮೊದಲು ಕರಾಚಿಯಲ್ಲಿ ಬಾಂಬ್ ಸ್ಫೋಟವಾದ ಕಾರಣ ಹೂಡಿಕೆದಾರರಾದ ಸೌದಿ ಪ್ರಜೆ ತಾರಿಕ್ ಬಿನ್ ಲಾಡೆನ್ ಈ ವ್ಯವಹಾರದಿಂದ ಹಿಂದೆ ರಿದಿದ್ದಾರೆ ಎಂದು ತಾರಿನ್ ಹೇಳಿದ್ದಾರೆ.
ಅಂತರ್ರಾಷ್ಟ್ರೀಯ ಆರ್ಥಿಕ ಸೇವೆ ಒದಗಿಸುವ ಏಶಿಯಾಸಿಟಿ ಟ್ರಸ್ಟ್ ನಲ್ಲಿ 2016ರ ಜನವರಿಯಲ್ಲಿ 5.6 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಪಾಕಿಸ್ತಾನದ ಜಲಸಂಪನ್ಮೂಲ ಸಚಿವ ಇಲಾಹಿ ಮುಂದಾಗಿದ್ದರು. ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದ್ದ ಭೂಅಭಿವೃದ್ಧಿ ಯೋಜನೆಯಲ್ಲಿ ನಡೆದಿದ್ದ ವ್ಯಾಪಕ ಭ್ರಷ್ಟಾಚಾರಕ್ಕೂ ಈ ಹೂಡಿಕೆಗೂ ಸಂಬಂವಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಜೊತೆಗೆ ಇಮ್ರಾನ್ಖಾನ್ ಪಕ್ಷ ತೆಹ್ರೀಕ್-ಇ-ಇನ್ಸಾಫ್ಗೆ ದೇಣಿಗೆ ನೀಡುವವರು, ವಿಪಕ್ಷ ಮುಖಂಡರ ಕುಟುಂಬದವರು ಹಾಗೂ ದೇಶದ ಪ್ರಭಾವಿ ಸೇನಾಧಿಕಾರಿಗಳ ಕುಟುಂಬ ಸದಸ್ಯರು ಸೇರಿದಂತೆ ಸುಮಾರು 700 ಇತರ ಪಾಕಿಸ್ತಾನೀಯರ ಹೆಸರಿದೆ. ಪಂಡೋರಾ ಪೇಪರ್ನಲ್ಲಿ ಉಲ್ಲೇಖಿಸಿರುವ ಎಲ್ಲಾ ಪ್ರಜೆಗಳ ಬಗ್ಗೆ ಸರಕಾರ ತನಿಖೆ ನಡೆಸಲಿದ್ದು ಅಕ್ರಮ ಸಾಬೀತಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದುಇಮ್ರಾನ್ಖಾನ್ ರವಿವಾರ ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಸೇನೆಯು ಸರಕಾರಿ ಯೋಜನೆಗಳ ನಿರ್ಮಾಣ ಕಾಮಗಾರಿ ನಿರ್ವಹಣೆ ಸಹಿತ ಅತೀ ದೊಡ್ಡ ಉದ್ಯಮ ಘಟಕವಾಗಿಯೂ ಕಾರ್ಯನಿರ್ವಹಿಸುತ್ತಿದೆ ಎಂದು 2021ರ ವಿಶ್ವಸಂಸ್ಥೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಿದೇಶದಲ್ಲಿ ಹಿಡುವಳಿ ಸಂಸ್ಥೆ(ಹೋಲ್ಡಿಂಗ್ ಕಂಪೆನಿ)ಯ ಮಾಲಕತ್ವ ಹೊಂದುವುದು ಹೆಚ್ಚಿನ ದೇಶಗಳಲ್ಲಿ ಕಾನೂನುಬಾಹಿರವಲ್ಲ ಮತ್ತು ಇದು ತಪ್ಪು ಎಂದೂ ಭಾವಿಸಲಾಗುತ್ತಿಲ್ಲ. ಆದರೆ ಅನೇಕಬಾರಿ ಈ ವ್ಯವಸ್ಥೆಯನ್ನು ತೆರಿಗೆ ತಪ್ಪಿಸುವ ಮಾರ್ಗವಾಗಿ ಅಥವಾ ರಹಸ್ಯವಾಗಿ ಬೃಹತ್ ಹಣಕಾಸಿನ ವ್ಯವಹಾರ ನಡೆಸಲು ಉಪಯೋಗಿಸಲಾಗುತ್ತಿದೆ.







