ತಂತ್ರಜ್ಞಾನದ ಬೆಳವಣಿಗೆಯಿಂದ ತರಬೇತಾದ ಕುಶಲಕರ್ಮಿಗಳಿಗೆ ಬೇಡಿಕೆ: ಉಡುಪಿ ಡಿಸಿ ಕೂರ್ಮಾ ರಾವ್

ಉಡುಪಿ, ಅ.4: ತಂತ್ರಜ್ಞಾನದ ಬೆಳವಣಿಗೆ ಹಾಗೂ ಕೈಗಾರಿಕೆಗಳ ಬೇಡಿಕೆ ಗಳಿಗೆ ಅನುಗುಣವಾಗಿ ತರಬೇತಾದ ಕುಶಲಕರ್ಮಿಗಳನ್ನು ಒದಗಿಸುವ ಹೊಣೆಯನ್ನು ಕೈಗಾರಿಕಾ ತರಬೇತಿ ಸಂಸ್ಥೆಗಳು ಹಾಗೂ ಶಿಶಿಕ್ಷು ಸಂಸ್ಥೆಗಳು ನಿರ್ವಹಿಸಬೇಕೆಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.
ಅಲೆವೂರು ಪ್ರಗತಿ ನಗರದಲ್ಲಿನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೋಮವಾರ ನಡೆದ ಜಿಲ್ಲಾ ಶಿಶಿಕ್ಷು ಮೇಳ-2021ನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ನಗರ ಹಾಗೂ ಗ್ರಾಮೀಣ ಭಾಗದಲ್ಲಿ ದೈನಂದಿನ ತಾಂತ್ರಿಕ ಪರಿಣಿತ ಕುಶಲ ಕರ್ಮಿಗಳ ಅವಶ್ಯಕತೆಗಳಿದ್ದು, ಸ್ವಾವಲಂಬನೆಯ ಆಶಯ ದೊಂದಿಗೆ ಸ್ವಯಂ ಪ್ರಗತಿ ಸಾಧಿಸುವ ಹಾಗೂ ಯೋಜನೆಯ ನಿರ್ದಿಷ್ಟ ಗುರಿಯನ್ನು ತಲುಪುವ ಅನುಭವಿ ತಂತ್ರಜ್ಞರ ಅವಶ್ಯಕತೆಗಳು ಇಂದಿನ ದಿನಗಳಲ್ಲಿ ಇದೆ. ಈ ನಿಟ್ಟಿನಲ್ಲಿ ಶಿಶಿಕ್ಷು ಮೇಳದಂತ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರಿಂದ ಕೈಗಾರಿಕೆಗಳು ಹಾಗೂ ತರಬೇತಿ ದಾರರ ನಡುವೆ ಸಮನ್ವಯ ಸೇತುವೆ ಕಲ್ಪಿಸುವ ಕಾರ್ಯ ಆಗುತ್ತದೆ ಎಂದರು.
ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಮಾತನಾಡಿ, ತಾಂತ್ರಿಕ ಶಿಕ್ಷಣವನ್ನು ನೀಡುವ ದಿಸೆಯಲ್ಲಿ ಸರಕಾರ ಹಲವಾರು ಯೋಜನೆ ಹಾಗೂ ಕಾರ್ಯಕ್ರಮ ಗಳನ್ನು ಜಾರಿಗೆ ತಂದಿದೆ. ಹೊಸ ಕಾಲೇಜುಗಳ ಸ್ಥಾಪನೆಯೊಂದಿಗೆ ಕಟ್ಟಡ, ಸಿಬ್ಬಂದಿ, ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲಾ ಅವಶ್ಯಕತೆಗಳನ್ನು ಪೂರೈಸುತ್ತಿದೆ. ಜಿಲ್ಲೆಯ ಕಾಲೇಜುಗಳಿಗೆ ಅಗತ್ಯವಿರುವ ಸೌಕರ್ಯಗಳನ್ನು ಪೂರೈಸುವ ಬಗ್ಗೆ ಸರಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಉಡುಪಿ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಕೃಷ್ಣರಾವ್ ಕೊಡಂಚ, ಅಲೆವೂರು ಗ್ರಾಪಂ ಅಧ್ಯಕ್ಷೆ ಪುಷ್ಪಾಅಂಚನ್ ಮಾತನಾಡಿದರು. ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಐ.ಎಂ.ಸಿ. ಅಧ್ಯಕ್ಷ ವಿಶ್ವನಾಥ ಭಟ್ ಎಂ. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ ಬಿ.ಆರ್., ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಅಧಿಕಾರಿ ರಾಜು ಅಲೆವೂರು ಉಪಸ್ಥಿತರಿದ್ದರು.
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಜಿಲ್ಲಾ ನೊಡಲ್ ಅಧಿಕಾರಿ ಜಗದೀಶ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಡಾ ಐಟಿಐ ಪ್ರಾಚಾರ್ಯ ಮನೋಹರ ಆರ್.ಕಾಮತ್ ಸ್ವಾಗತಿಸಿದರು. ಸತೀಶ್‌ಎಸ್. ವಂದಿಸಿದರು. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.







