‘ಮಹಿಷಾ ದಸರಾ ಆಚರಣೆ ಮಾಡುತ್ತೇವೆ, ತಾಕತ್ತಿದ್ದರೆ ತಡೆಯಲಿ’: ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು

ಮೈಸೂರು, ಅ.4: ಮಹಿಷಾ ದಸರಾಗೆ ಅವಕಾಶ ನೀಡದ ಮೈಸೂರು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್ ಕರ್ತವ್ಯ ನಿರ್ವಹಿಸಲು ಅನರ್ಹರು, ಅಯೋಗ್ಯರು ಮತ್ತು ಅಸಮರ್ಥರು ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ವಾಗ್ದಾಳಿ ನಡೆಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಿಷಾ ದಸರಾ ಆಚರಣೆಗೆ ಕೋರಿ ಜಿಲ್ಲಾಧಿಕಾರಿ ಮತ್ತು ಮೈಸೂರು ನಗರ ಪೊಲೀಸ್ ಕಮಿಷನರ್ ಅವರಿಗೆ 15 ದಿನಗಳ ಹಿಂದೆ ಲಿಖಿತ ಮನವಿ ಸಲ್ಲಿಸಿದ್ದರೂ, ಬಿಜೆಪಿ ಪಕ್ಷದ ಏಜೆಂಟ್‌ಗಳಂತೆ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ನಮ್ಮದು ಬಹುತ್ವ ಭಾರತ, ಬಿಜೆಪಿ ಸರಕಾರ ಅಧಿಕಾರದಲ್ಲಿದ್ದರೂ ಸಂವಿಧಾನದ ಮೇಲೆ ದೇಶ ಆಡಳಿತ ನಡೆಸುತ್ತಿದೆ. ಸಂವಿಧಾನದ ಆರ್ಟಿಕಲ್ 25ರ ಅಡಿಯಲ್ಲಿ ಧಾರ್ಮಿಕ ಆಚರಣೆಗೆ ಅವಕಾಶವಿದೆ. ಆದರೆ ಮೈಸೂರು ಜಿಲ್ಲಾಧಿಕಾರಿ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದು, ಬಹುಜನರ ಧಾರ್ಮಿಕ ಆಚರಣೆಗೆ ಅಡ್ಡಿಯುಂಟು ಮಾಡಿದ್ದಾರೆ. ಇವರಿಗೆ ಜಿಲ್ಲಾಧಿಕಾರಿಯಾಗಿ ಮುಂದುವರಿಯಲು ನೈತಿಕತೆ ಇಲ್ಲ ಎಂದು ಹೇಳಿದರು.
ನಾವು ಇತಿಹಾಸದಲ್ಲಿ ದಾಖಲೆಯಾಗಿರುವ ಅಂಶಗಳನ್ನು ಆಚರಣೆ ಮಾಡುತ್ತಿದ್ದೇವೆ. ಮಹಿಷ ಮಂಡಲ ಇರುವುದು ವಿಶ್ವಭೂಪಟದಲ್ಲಿ ದಾಖಲಾಗಿದೆ. ದಸರಾ ಆಚರಣೆ ವಿಜಯನಗರದ ರಾಜರ ಕೊಡುಗೆ, ಇದನ್ನು ಮೈಸೂರು ರಾಜರು ಮುಂದುವರಿಸಿಕೊಂಡು ಬಂದರು. ನಾಡ ದೇವತೆ ಚಾಮುಂಡೇಶ್ವರಿಯಲ್ಲ, ಭಾರತಾಂಬೆ ಎಂದು ಹೇಳಿದರು.
ಮಹಿಷಾ ದಸರಾ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಮಾತನಾಡಿ, ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಬೇಕಾದ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಕಮೀಷನರ್ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಇವರಿಗೆ ಐಎಎಸ್, ಐಪಿಎಸ್ ಸರ್ಟಿಫಿಕೇಟ್ ಹೇಗೆ ಕೊಟ್ಟರೊ ಗೊತ್ತಿಲ್ಲ, ಮೊದಲು ಇವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಅ.5ರಂದು ಅಶೋಕಪುರಂ ಅಂಬೇಡ್ಕರ್ ಉದ್ಯಾನವನದಲ್ಲಿ ಮಹಿಷ ದಸರಾ ಆಚರಣೆ ಮಾಡುತ್ತೇವೆ. ನಮಗೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ, ತಾಕತ್ತಿದ್ದರೆ ತಡೆಯಲಿ ನೋಡೋಣ ಎಂದು ಸವಾಲು ಹಾಕಿದರು. ಸುದ್ದಿಗೋಷ್ಠಿಯಲ್ಲಿ ಲೇಖಕ ಸಿದ್ದಸ್ವಾಮಿ, ವಿಷ್ಣು, ಸೋಮಯ್ಯ ಮಲೆಯೂರು ಉಪಸ್ಥಿತರಿದ್ದರು.
ಸಂವಿಧಾನಕ್ಕೆ ಬದ್ಧವಾಗಿ ಮಹಿಷ ದಸರಾಗೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿ ಮತ್ತು ಸಂಬಂಧಪಟ್ಟವರಿಗೆ ಸೂಚನೆ ನೀಡದ ಬಸವರಾಜ ಬೊಮ್ಮಾಯಿ ರಾಜ್ಯದ ಮೂರ್ಖ ಮುಖ್ಯಮಂತ್ರಿ. ಒಬ್ಬ ಶೂದ್ರ ಮುಖ್ಯಮಂತ್ರಿಯಾಗಿ ನಡೆದುಕೊಳ್ಳದೆ ವೈದಿಕ ಶಾಹಿಗಳ ಮುಖ್ಯಮಂತ್ರಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಇವರಿಗೆ ಬಹುಜನರ ಓಟು ಬೇಕು, ಆದರೆ ಆವರ ಸಂಸ್ಕೃತಿ ಆಚಾರ ವಿಚಾರಗಳು ಬೇಡವಾಗಿದೆ.
- ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು, ಪ್ರಗತಿಪರ ಚಿಂತಕ
ಮೈಸೂರಿಗೆ ಅಂಟಿರುವ ಚಾರಿತ್ರಿಕ ಕಳಂಕವನ್ನು ತೊಡೆದು ಹಾಕಲು ಬಹುಜನರು ಪ್ರಯತ್ನ ಪಡುತ್ತಿದ್ದು, ಚಾಮುಂಡಿ ಕೊಲೆಗಡುಕಿ, ಮಹಿಷಾ ರಾಕ್ಷಸ ಎಂದು ಸೃಷ್ಠಿಸಲಾಗಿದೆ. ಆದರೆ ಚಾಮುಂಡಿ ಜಾನಪದ ಮತ್ತು ಜಾತ್ಯಾತೀತ ಮಹಿಳೆ. ಮಹಿಷಾ ಮೈಸೂರಿನ ಆದಿರಾಜ ಎಂಬುದನ್ನು ಸಾಭೀತುಪಡಿಸಲು ಮಹಿಷಾ ದಸರಾ ಆಚರಣೆ ಮಾಡುತ್ತಿದ್ದೇವೆ.
-ಸಿದ್ದಸ್ವಾಮಿ, ಲೇಖಕ







