ಬೆಂಗಳೂರಿನ ವ್ಯಕ್ತಿಯಿಂದ ವಂಚಿಸಿ ಮದುವೆ: ಪತಿ ವಿರುದ್ಧ ದೂರು ನೀಡಿದ ಪತ್ನಿ
ಮಂಗಳೂರು, ಅ.4: ಬೆಂಗಳೂರಿನ ರಾಘವೇಂದ್ರ ಕುಲಕರ್ಣಿ ಎಂಬಾತ ವಂಚಿಸಿ ಮದುವೆಯಾಗಿರುವ ಬಗ್ಗೆ ಆತನ ಪತ್ನಿ ಮೂಡುಬಿದಿರೆ ಬೆಳುವಾಯಿಯ ಮಹಿಳೆ ನಗರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆರೋಪಿ, ಪತಿ ರಾಘವೇಂದ್ರ 2017ರ ಜೂ.18ರಂದು ತನ್ನನ್ನು ಬೆಂಗಳೂರಿನ ರಾಘವೇಂದ್ರ ಮಠದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದ. ಮದುವೆ ಸಂದರ್ಭ 1 ಲಕ್ಷ ರೂ. ವರದಕ್ಷಿಣೆ ಪಡೆದಿದ್ದ. ಮದುವೆಯಾದ ನಂತರ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದ. ಗರ್ಭಿಣಿಯಾದ ಸಂದರ್ಭದಲ್ಲಿ ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ಊರಿಗೆ ವಾಪಸಾಗಿದ್ದೆ. ಬಳಿಕ ಮಗು ಹುಟ್ಟಿದ ನಂತರ ಮಗು ಹಾಗೂ ತನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ನಂತರ, ತಾಯಿ ನನ್ನನ್ನು ಮತ್ತು ಮಗುವನ್ನು ಬೆಂಗಳೂರಿಗೆ ಬಿಟ್ಟು ಬಂದಿದ್ದರು. ಆದರೆ ಪತಿ ಒತ್ತಡ ಹಾಕಿ ಅಲ್ಲಿಂದ ಮತ್ತೆ ತವರು ಮನೆಗೆ ಕಳುಹಿಸಿದ್ದ. ಬಳಿಕ ತವರು ಮನೆಗೂ ಬಂದು ಹಿಂಸೆ ನೀಡಿದ್ದಾನೆ. ಬಳಿಕ ಆತ ಬೆಂಗಳೂರಿಗೆ ತೆರಳಿದ್ದ. ಆತನಿಗೆ ಪೋನ್ ಕರೆ ಮಾಡಿದಾಗ ಆತ ಇನ್ನೊಂದು ಮದುವೆಯಾಗಿರುವುದು ಗೊತ್ತಾಯಿತು. ಬೆಂಗಳೂರಿಗೆ ತೆರಳಿ ನೋಡಿದಾಗ ಆತ ಇನ್ನೊಂದು ಮದುವೆಯಾಗಿರುವುದು ಕೂಡ ಬೆಳಕಿಗೆ ಬಂದಿತು. ಆತ ನನ್ನನ್ನು ಮುದುವೆಯಾಗುವ ಮೊದಲು ಕೂಡ ಒಬ್ಬರನ್ನು ವಿವಾಹವಾಗಿ ಅವರಿಗೆ ವಿಚ್ಚೇದನ ನೀಡಿದ್ದ. ಅದನ್ನು ನನಗೆ ತಿಳಿಸದೆ ಮೋಸ ಮಾಡಿ ಮದುವೆಯಾಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.







