ಬೈಕ್ ಢಿಕ್ಕಿ ಹೊಡೆದು ಮಹಿಳೆ ಮೃತ್ಯು ಪ್ರಕರಣ: ಆರೋಪಿಗೆ ಆರು ತಿಂಗಳು ಜೈಲು
ಮಂಗಳೂರು, ಅ.4: ನಿರ್ಲಕ್ಷ್ಯತನದಿಂದ ಬೈಕ್ ಚಲಾಯಿಸಿ ಮಹಿಳೆಯೊಬ್ಬರ ಸಾವಿಗೆ ಕಾರಣನಾದ ಸವಾರ ಗೌತಮ್ ಎನ್ನುವವನಿಗೆ ಮಂಗಳೂರಿನ ಎರಡನೇ ಜೆಎಂಎಫ್‌ಸಿ ನ್ಯಾಯಾಲಯ ಆರು ತಿಂಗಳ ಸಾದಾ ಶಿಕ್ಷೆ ಮತ್ತು 6 ಸಾವಿರ ರೂ. ದಂಡವಿಧಿಸಿ ತೀರ್ಪು ನೀಡಿದೆ.
ಘಟನೆ ವಿವರ: 2017ರ ಆಗಸ್ಟ್ 30ರಂದು ಬೆಳಗ್ಗೆ 9:10ರ ವೇಳೆಗೆ ಮುಕ್ಕ ಚೆಕ್ ಪೋಸ್ಟ್ ಬಳಿ ರಸ್ತೆ ದಾಟುತ್ತಿದ್ದ ವಾರಿಜಾ ಎನ್ನುವವರಿಗೆ ಗೌತಮ್ ಎಂಬವರು ಅಜಾಗರೂಕತೆಯಿಂದ ಬೈಕ್ ಚಲಾಯಿಸಿಕೊಂಡು ಬಂದು ಢಿಕ್ಕಿ ಹೊಡೆದಿದ್ದರು. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ವಾರಿಜಾ ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದರು. ಈ ಕುರಿತು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆಪಾದಿತನ ವಿರುದ್ಧ ಆಗಿನ ಪೊಲೀಸ್ ನಿರೀಕ್ಷಕ ಮಂಜುನಾಥ್ ಜೆಎಂಎಫ್‌ಸಿ ಎರಡನೇ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದೆ. ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ ಮೂರು ತಿಂಗಳು 10 ದಿನ ಸಾದಾ ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶೆ ಅಂಜಲಿ ಶರ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.





