ಕಾನೂನು ಸೇವಾ ಪ್ರಾಧಿಕಾರದ ಸದುಪಯೋಗಪಡೆದುಕೊಳ್ಳಿ: ನ್ಯಾ.ಮುರಳೀಧರ್ ಪೈ
ಮಂಗಳೂರು, ಅ.4: ಆಝಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ದೇಶಾದ್ಯಂತ ಅ.2ರಿಂದ ನ.14ರವರೆಗೆ ನಿರಂತರ ಕಾನೂನು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೂ ಆಗಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ನ್ಯಾ. ಮುರಳೀಧರ್ ಪೈ ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪ್ರತಿಯೊಬ್ಬರಿಗೂ ಕಾನೂನು ಸೇವೆಗಳ ಬಗ್ಗೆ ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಗ್ರಾಮೀಣ ಭಾಗದಲ್ಲಿರುವ ಜನರಿಗೆ ಹೆಚ್ಚಾಗಿ ಕಾನೂನು ಸೇವೆಗಳ ಕುರಿತು ಹೆಚ್ಚಿನ ಮಟ್ಟದಲ್ಲಿ ಅರಿವು ಇರುವುದಿಲ್ಲ. ಇಂತಹ ಕಾರ್ಯ ಕ್ರಮಗಳನ್ನು ಆಯೋಜಿಸಿ ಜಾಗೃತಿ ಮೂಡಿಸುವುದರಿಂದ ಸಂಪೂರ್ಣ ಸೇವೆಗಳನ್ನು ಒದಗಿಸಿದಂತೆ ಆಗುತ್ತದೆ. ಸಾರ್ವಜನಿಕರಿಗೆ ಇರುವ ಹಕ್ಕು ಹಾಗೂ ಪರಿಹಾರದ ಬಗ್ಗೆ ವಂಚಿತರಾಗದೇ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪೃಥ್ವಿರಾಜ್ ವರ್ಣೇಕರ್ ಉಪಸ್ಥಿತರಿದ್ದರು.







