ಚಾರ್ಮಾಡಿಯಲ್ಲಿ ಪ್ರವಾಸಿಗರ ಕಿರಿಕಿರಿ
ಮಾನ್ಯರೇ,
ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರವಾಸಕ್ಕೆಂದು ಇತ್ತೀಚೆಗೆ ನಾನು ಸ್ನೇಹಿತರ ಜೊತೆ ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟಿಯ ಮೂಲಕ ಕಾರ್‌ನಲ್ಲಿ ತೆರಳಿದ್ದೆ. ಆದರೆ ಚಾರ್ಮಾಡಿ ಗ್ರಾಮದ ಬಳಿ ಬರುವ ಜಲಪಾತದ ಹತ್ತಿರ ತುಂಬಾ ಕಿರಿಕಿರಿ ಎನಿಸಿತು. ಯಾಕೆಂದರೆ ಇದೇ ರಸ್ತೆಯ ಮೂಲಕ ಬರುವ ಪ್ರವಾಸಿಗರು ಜಲಪಾತದ ಜೊತೆಗೆ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ರಸ್ತೆಬದಿಯಲ್ಲಿಯೇ ವಾಹನಗಳನ್ನು ನಿಲ್ಲಿಸಿ, ಫೋಟೊ ಕ್ಲಿಕ್ಕಿಸಿಕೊಳ್ಳುವುದರಿಂದ ಮತ್ತು ರಸ್ತೆ ನಡುವೆಯೇ ಹಾಡಿಗೆ ಡ್ಯಾನ್ಸ್ ಮಾಡುವುದರಿಂದ ರಸ್ತೆಯಲ್ಲಿ ಸಂಚರಿಸುವವರಿಗೆ ಟ್ರಾಫಿಕ್ ಜಾಮ್ ಆಗಿ ತುಂಬಾ ತೊಂದರೆಯಾಯಿತು. ಜೊತೆಗೆ ರಸ್ತೆ ಕೂಡ ಕಿರಿದಾಗಿರುವುದರಿಂದ ಮತ್ತು ಅಪಾಯಕಾರಿ ತಿರುವುಗಳಿರುವುದರಿಂದ ಅಪಘಾತಗಳಾಗುವ ಸಂಭವವೂ ಉಂಟು. ಮೂರು ತಿಂಗಳ ಹಿಂದೆ ಪ್ರವಾಸಿಗರ ಹುಚ್ಚಾಟ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ವರದಿಯಾದ ಪರಿಣಾಮ ಪೊಲೀಸ್ ಕಾವಲನ್ನು ಹಾಕಿತ್ತು. ಆದರೆ ಅದು ತಾತ್ಕಾಲಿಕ ಮಾತ್ರ.
ಈಗ ಅಲ್ಲಿ ಪೊಲೀಸ್ ಕಾವಲು ಇಲ್ಲದ ಪರಿಣಾಮ ಪ್ರವಾಸಿಗರು ಲಂಗುಲಗಾಮಿಲ್ಲದೆ ರಸ್ತೆಯಲ್ಲಿಯೇ ವಿಚಿತ್ರವಾಗಿ ವರ್ತಿಸುತ್ತಿರುವುದು ಸಂಚರಿಸುವವರಿಗೆ ತುಂಬಾ ತಲೆನೋವಾಗಿದೆ. ಈ ಜಲಪಾತದ ಬಳಿ ಮುಂದೆ ಯಾವುದೇ ರೀತಿಯ ದೊಡ್ಡ ಅನಾಹುತಗಳು ಸಂಭವಿಸುವ ಮುನ್ನ ಜಿಲ್ಲಾಡಳಿತ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ.





