ರೈತರ ಮೇಲೆ ಹರಿದ ಕಾರಿನಲ್ಲಿ ನಾನಿರಲಿಲ್ಲ: ಆಶೀಶ್ ಮಿಶ್ರಾ

ಉತ್ತರಪ್ರದೇಶದ ಲಖೀಂಪುರ ಖೇರಿ ಜಿಲ್ಲೆಯಲ್ಲಿ ಪ್ರತಿಭಟನನಿರತ ರೈತರ ಮೇಲೆ ಹರಿದ ಕಾರೊಂದರಲ್ಲಿ ತಾನು ಇದ್ದೆನೆಂಬ ಆರೋಪಗಳನ್ನು ಕೇಂದ್ರ ಸಹಾಯಕ ಗೃಹ ಸಚಿವ ಅಜಯ್‌ಕುಮಾರ್ ಮಿಶ್ರಾ ಅವರ ಪುತ್ರ ಆಶೀಶ್ ಮಿಶ್ರಾ ನಿರಾಕರಿಸಿದ್ದಾರೆ.
ಬನ್ವಾರಿಪುರ ಗ್ರಾಮದಲ್ಲಿ ತನ್ನ ಪೂರ್ವಿಕರ ಮನೆಯಲ್ಲಿ ಕುಸ್ತಿಪಂದ್ಯವನ್ನು ಆಯೋಜಿಸಲಾಗಿತ್ತು. ರವಿವಾರ ಬೆಳಗ್ಗಿನಿಂದ ಸಂಜೆಯವರೆಗೆ ತಾನು ಅಲ್ಲಿಯೇ ಇದ್ದೆನೆಂದು ಅವರು ಹೇಳಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ ಆತಿಥಿಗಳನ್ನು ಸ್ವಾಗತಿಸಲು ತಾವು ಎರಡು ಮೂರು ವಾಹನಗಳನ್ನು ಕಳುಹಿಸಿದ್ದು, ಅದರಲ್ಲಿ ತನ್ನ ಮಹೀಂದ್ರಾ ವಾಹನವೂ ಇದ್ದುದಾಗಿ ಅವರು ಹೇಳಿದ್ದಾರೆ.
‘‘ಬೆಂಗಾವಲು ವಾಹನದಲ್ಲಿದ್ದ ಫೋರ್ಚುನರ್ ವಾಹನವು ರೈತರನ್ನು ಕೆಡವಿಹಾಕಿದೆಯೆಂಬುದು ಸರಿಯಲ್ಲ. ನಮ್ಮ ಕಾರ್ಯಕರ್ತರಲ್ಲೊಬ್ಬರು ಉಪಮುಖ್ಯಮಂತ್ರಿಯವರನ್ನು ಸ್ವಾಗತಿಸಲು ತೆರಳಿದ್ದರು. ಮುಂಚೂಣಿಯಲ್ಲಿದ್ದ ಥಾರ್ ಎಸ್‌ಯುವಿ ವಾಹನದ ಮೇಲೆ ದೊಣ್ಣೆಗಳು ಹಾಗೂ ಕಲ್ಲುಗಳಿಂದ ದಾಳಿ ನಡೆಸಲಾಯಿ ಆಗ ಕಾರು ತನ್ನ ಸಮತೋಲನ ಕಳೆದುಕೊಂಡು,ಪಲ್ಟಿ ಹೊಡೆಯಿತು’’ ಎಂದು ಮಿಶ್ರಾ ತಿಳಿಸಿದ್ದಾರೆ.
‘‘ಇಂತಹ ಕೆಲಸಗಳನ್ನು ಮಾಡುವವರನ್ನು ರೈತರು ಎಂದು ಕರೆಯಲು ಸಾಧ್ಯವಿಲ್ಲ. ಭಾರತೀಯ ರೈತರು ಅಷ್ಟೊಂದು ಹೃದಯಹೀನರಲ್ಲ ಹಾಗೂ ಕ್ರೂರಿಗಳಲ್ಲ. ರೈತರ ಸಂಘಟನೆಯ ನಾಯಕತ್ವ ವಹಿಸಿರುವರಲ್ಲಿ ತಪ್ಪಿದೆ. ಇದು ಪ್ರಜಾಸತ್ತಾತ್ಮಕ ದೇಶವಾಗಿದೆ. ಪ್ರತಿಯೊಬ್ಬರಿಗೂ ಶಾಂತಿಯವಾಗಿ ಪ್ರತಿಭಟನೆ ನಡೆಸುವ ಹಕ್ಕಿದೆ ಎಂದು ಅವರು ಹೇಳಿದ್ದಾರೆ.
ಪ್ರತಿಭಟನನಿರತ ರೈತರ ಮೇಲೆ ಮೂರು ಕಾರುಗಳ ಪೈಕಿ ಒಂದನ್ನು ಆಶೀಷ್ ಮಿಶ್ರಾ ಚಲಾಯಿಸುತ್ತಿದ್ದರೆಂದು ರೈತ ನಾಯಕರು ಆರೋಪಿಸಿದ್ದಾರೆ. ಅಶೀಷ್ ಮಿಶ್ರಾ ವಿರುದ್ಧ ಕೊಲೆ ಆರೋಪವನ್ನು ಕೂಡಾ ಹೊರಿಸಲಾಗಿದೆ.
ಲಖೀಂಪುರ ಖೇರಿಗೆ ಕೇಂದ್ರ ಸಚಿವ ಅಜಯ್‌ಕುಮಾರ್ ಮಿಶ್ರಾ ಹಾಗೂ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಭೇಟಿಯನ್ನು ಪ್ರತಿಭಟನಕಾರ ರೈತರು ತಡೆಯಲು ಯತ್ನಿಸಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು.







