ಆರು ಗಂಟೆ ಸ್ಥಗಿತ ಬಳಿಕ ಯಥಾಸ್ಥಿತಿಗೆ ಬಂದ ವಾಟ್ಸ್ಆ್ಯಪ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ

ಹೊಸದಿಲ್ಲಿ: ಸೋಮವಾರ ರಾತ್ರಿ ಆರು ಗಂಟೆ ಕಾಲ ಸ್ಥಗಿತಗೊಂಡಿದ್ದ ವಾಟ್ಸ್ಆ್ಯಪ್ ಮತ್ತು ಸಮೂಹದ ಇತರ ಸೇವೆಗಳು ಮಂಗಳವಾರ ಮುಂಜಾನೆ ಯಥಾಸ್ಥಿತಿಗೆ ಮರಳಿವೆ.
ಈ ಮೆಸೆಜಿಂಗ್ ಆ್ಯಪ್ ಸ್ಥಗಿತಗೊಂಡಿದ್ದರಿಂದ ಬಳಕೆದಾರರಿಗೆ ಆಗಿರುವ ಅನಾನುಕೂಲಗಳ ಬಗ್ಗೆ ವಾಟ್ಸ್ಆ್ಯಪ್ ಸಿಇಓ ವಿಲ್ ಕ್ಯಾಥ್‌ಕರ್ಟ್ ವಿಷಾದ ವ್ಯಕ್ತಪಡಿಸಿದ್ದಾರೆ. ಪ್ರತಿ ದಿನ ಈ ಪ್ಲಾಟ್‌ಫಾರ್ಮ್ ಅನ್ನು ಎಷ್ಟು ಮಂದಿ ಮತ್ತು ಸಂಸ್ಥೆಗಳು ಬಳಕೆ ಮಾಡುತ್ತಿದ್ದಾರೆ ಎನ್ನುವುದನ್ನು ಇದು ನಮಗೆ ನೆನಪಿಸಿದೆ ಎಂದು ಅವರು ಹೇಳಿದ್ದಾರೆ.
ಈ ತಾಂತ್ರಿಕ ದೋಷದ ಬಳಿಕ ಈ ಆ್ಯಪ್ ಮತ್ತೆ ಆನ್‌ಲೈನ್ ಆಗುವಂತೆ ಮಾಡುವಲ್ಲಿ ಕಠಿಣ ಪರಿಶ್ರಮ ವಹಿಸಿದ ಎಲ್ಲರಿಗೂ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಈ ಘಟನೆಯಿಂದ ವಾಟ್ಸ್ಆ್ಯಪ್ ತಂಡ "ಕಲಿಯುತ್ತದೆ ಮತ್ತು ಬೆಳೆಯುತ್ತದೆ" ಎಂದು ಅವರು ಹೇಳಿದ್ದಾರೆ.
"ನಾವು ಮತ್ತೆ ಯಥಾಸ್ಥಿತಿಗೆ ಬಂದಿದ್ದೇವೆ ಮತ್ತು ಇದೀಗ ಚಾಲನೆಯಲ್ಲಿದೆ" ಎಂದು ಫೇಸ್‌ಬುಕ್ ಮಾಲಿಕತ್ವದ ವಾಟ್ಸ್ಆ್ಯಪ್ ನ ಮುಖ್ಯಸ್ಥರು ಟ್ವೀಟ್ ಮಾಡಿದ್ದಾರೆ. ಸರಳ, ಸುಭದ್ರ ಮತ್ತು ವಿಶ್ವಾಸಾರ್ಹ ಖಾಸಗಿ ಮೆಸೆಜಿಂಗ್ ಆ್ಯಪ್ ಒದಗಿಸಲು ನಮ್ಮ ಪ್ರಯತ್ನ ಮುಂದುವರಿಸಲಿದ್ದೇವೆ ಎಂದು ಭರವಸೆ ನೀಡಿದ್ದಾರೆ.
ವಾಟ್ಸ್ಆ್ಯಪ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಸೇವೆಯಲ್ಲಿ ಆಗಿರುವ ವ್ಯತ್ಯಯಕ್ಕೆ ಸಮೂಹ ಸಿಇಓ ಮಾರ್ಕ್ ಝುಕೆರ್‌ಬರ್ಗ್ ಕ್ಷಮೆ ಯಾಚಿಸಿದ್ದಾರೆ. "ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸ್ಆ್ಯಪ್ ಮತ್ತು ಮೆಸೆಂಜರ್ ಮತ್ತೆ ಆನ್‌ಲೈನ್ ಆಗಿದೆ" ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿರುವ ಅವರು, "ಇಂದಿನ ವ್ಯತ್ಯಯಕ್ಕೆ ಕ್ಷಮೆ ಯಾಚಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.