ಶಿಲ್ಲಾಂಗ್ನಲ್ಲಿ ಎನ್ಪಿಪಿ ಕಚೇರಿ ಹೊರಗೆ ಸಜೀವ ಬಾಂಬ್ ಪತ್ತೆ, ಹೊಣೆ ಹೊತ್ತುಕೊಂಡ ಎಚ್ಎನ್ಎಲ್ಸಿ

Photo: YouTube
ಹೊಸದಿಲ್ಲಿ: ಮೇಘಾಲಯದ ರಾಜಧಾನಿ ಶಿಲ್ಲಾಂಗ್ನಲ್ಲಿ ಅಲ್ಲಿನ ಆಡಳಿತ ಪಕ್ಷವಾಗಿರುವ ನ್ಯಾಷನಲ್ ಪೀಪಲ್ಸ್ ಪಾರ್ಟಿಯ(ಎನ್ಪಿಪಿ) ಕಚೇರಿಯ ಗೇಟ್ ಸಮೀಪ ಸೋಮವಾರ ಸಜೀವ ಐಇಡಿ ಪತ್ತೆಯಾಗಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ರಾಜ್ಯಕ್ಕೆ ಭೇಟಿ ನೀಡಿದ ದಿನಂದೇ ಈ ಸ್ಫೋಟಕ ಪತ್ತೆಯಾಗಿದೆ ಎಂದು thewire.in ವರದಿ ಮಾಡಿದೆ. ಅಸ್ಸಾಂಗೆ ಭೇಟಿ ನೀಡಿದ್ದ ನಾಯ್ಡು ಶಿಲ್ಲಾಂಗ್ನಲ್ಲಿ ರಸ್ತೆ ಯೋಜನೆಯೊಂದನ್ನು ಉದ್ಘಾಟಿಸಲು ಹಾಗೂ ಶಿಲ್ಲಾಂಗ್ನ ನಾರ್ತ್-ಈಸ್ಟರ್ನ್ ಕೌನ್ಸಿಲ್ ಅನ್ನು ಭೇಟಿಯಾಗಲು ಆಗಮಿಸಿದ್ದರು.
ಸೋಮವಾರ ಅಪರಾಹ್ನ ಸುಮಾರು 2 ಗಂಟೆಗೆ ಈ ಸಜೀವ ಬಾಂಬ್ ಇರುವ ಚೀಲನವನ್ನು ಅಲ್ಲಿನ ಬಾಂಬ್ ನಿಷ್ಕ್ರಿಯ ದಳ ವಶಕ್ಕೆ ಪಡೆದುಕೊಂಡು ಅದನ್ನು ನಿಷ್ಕ್ರಿಯಗೊಳಿಸಿದೆ. ಪಕ್ಷದ ಸದಸ್ಯರು ಗೇಟ್ ಸಮೀಪ ಚೀಲವೊಂದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಚೀಲದಲ್ಲಿ 2 ಕೆಜಿ ಸ್ಫೋಟಕವಿತ್ತು.
ಈ ಸ್ಫೋಟಕ ತಾನಿರಿಸಿದ್ದು ಎಂದು ರಾಜ್ಯದ ನಿಷೇಧಿತ ಸಶಸ್ತ್ರ ಸಂಘಟನೆ ಹೈನ್ನೀವ್ಟ್ರೆಪ್ ನ್ಯಾಷನಲ್ ಲಿಬರೇಷನ್ ಕೌನ್ಸಿಲ್ ಹೇಳಿಕೊಂಡಿದೆ. ಸಂಘಟನೆಯ ಪ್ರಚಾರ ಕಾರ್ಯದರ್ಶಿ ಸೈನ್ಕುಪರ್ ನೊಂಗ್ಟ್ರಾ ಈ ಕುರಿತು ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ಹೇಳಿಕೊಂಡಿದಾರೆ. ಆಗಸ್ಟ್ ತಿಂಗಳಿನಲ್ಲಿ ತನ್ನ ನಾಯಕ ಚೆರಿಸ್ಟರ್ಫೀಲ್ಡ್ ತಂಗ್ಖೀವ್ ಅವರನ್ನು ಶಿಲ್ಲಾಂಗ್ನ ಅವರ ನಿವಾಸದಲ್ಲಿ ಎನ್ಕೌಂಟರ್ನಲ್ಲಿ ಹತ್ಯೆಗೈದಿದ್ದನ್ನು ವಿರೋಧಿಸಿ ಈ ಬಾಂಬ್ ಇರಿಸಿದ್ದಾಗಿ ಆತ ಹೇಳಿದ್ದಾರೆ.