ಮಂಗಳೂರಿನಲ್ಲಿ ಹಾಡಹಗಲೇ ಶೂಟೌಟ್ : ಯುವಕನ ತಲೆಗೆ ಗಂಭೀರ ಗಾಯ

ಮಂಗಳೂರು, ಅ.5: ನಗರದ ಮೋರ್ಗನ್ಸ್‌ಗೇಟ್‌ನಲ್ಲಿ ಮಂಗಳವಾರ ಸಂಜೆ ವೇಳೆ ಶೂಟೌಟ್ ನಡೆದ ಘಟನೆ ವರದಿಯಾಗಿದೆ.
ವೈಷ್ಣವಿ ಎಕ್ಸ್ ಪ್ರೆಸ್ ಕಾರ್ಗೋ ಸಂಸ್ಥೆಯ ಮೋರ್ಗನ್ಸ್‌ಗೇಟ್ ಕಚೇರಿ ಮಾಲಕ ರಾಜೇಶ್ ಎಂಬವರೇ ಗುಂಡು ಹೊಡೆದವರು ಎಂದು ಹೇಳಲಾಗುತ್ತಿದ್ದು, ಅವರ ಪುತ್ರ ಸುಧೀಂದ್ರ ಗಾಯಾಳು ಎಂದು ತಿಳಿದುಬಂದಿದೆ. ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ವೈಷ್ಣವಿ ಎಕ್ಸ್ ಪ್ರೆಸ್ ಕಾರ್ಗೋ ಸಂಸ್ಥೆಯ ಮೋರ್ಗನ್ಸ್‌ಗೇಟ್ ಕಚೇರಿಯಲ್ಲಿ ಈ ಘಟನೆ ವರದಿಯಾಗಿದೆ. ಸಂಸ್ಥೆಯ ಮಾಲಕ ರಾಜೇಶ್ ಎಂಬವರಲ್ಲಿ ಕೆಲಸಕ್ಕಿದ್ದ ನೌಕರ ವೇತನದ ಬಗ್ಗೆ ವಿಚಾರಿಸಲು ಬಂದಿದ್ದಾರೆ. ಈ ಸಂದರ್ಭದಲ್ಲಿ ಮಾಲಕರು ಹಾಗೂ ನೌಕರನ ನಡುವೆ ಮಾತಿನ ಚಕಮಕಿ ನಡೆದಿದೆ. ರಾಜೇಶ್ ಕೋಪದಲ್ಲಿ ತನ್ನ ರಿವಾಲ್ವರ್ ನಿಂದ ಗುಂಡು ಹಾರಿಸಿದ್ದಾರೆ ಎನ್ನಲಾಗಿದ್ದು, ಅದು ತಪ್ಪಿ ತನ್ನ ಮಗನ ತಲೆಗೆ ತಾಗಿದೆ. ಕಚೇರಿ ಹೊರ ಭಾಗದಲ್ಲಿ ಘಟನೆ ನಡೆದಿದ್ದು, ಮಗ ಎಸೆಸೆಲ್ಸಿ ಓದುತ್ತಿದ್ದ ಸುಧೀಂದ್ರನ ತಲೆಯ ಭಾಗಕ್ಕೆ ಗುಂಡು ಬಿದ್ದಿದ್ದು ಗಾಯಗೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಶಶಿಕುಮಾರ್ ಸೇರಿದಂತೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ವೇತನದ ಬಗ್ಗೆ ವಿಚಾರಿಸಲು ಬಂದಿದ್ದ ಸಿಬ್ಬಂದಿಗೆ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿ ಜನಜಂಗುಳಿ ಜಮಾಯಿಸಿದೆ. ಗುಂಡಿನ ಶಬ್ದ ಕೇಳಿಸುತ್ತಿದ್ದಂತೆ ಸ್ಥಳದಲ್ಲಿ ಸ್ವಲ್ಪ ಬಿಗುವಿನ ವಾತಾವರಣದಿಂದ ಕೂಡಿತ್ತು.










