ಲಖಿಂಪುರ ಹಿಂಸಾಚಾರ ಆರೋಪಿಯನ್ನು ಬಂಧಿಸದಿದ್ದರೆ ಪಂಜಾಬ್ ಕಾಂಗ್ರೆಸ್ ನಿಂದ ಪಾದಯಾತ್ರೆ: ಸಿಧು ಎಚ್ಚರಿಕೆ

ಚಂಡೀಗಢ/ ಹೊಸದಿಲ್ಲಿ: ಲಖಿಂಪುರ ಖೇರಿಯ ಹಿಂಸಾಚಾರದ ಆರೋಪಿಯನ್ನು ನಾಳೆ ಬಂಧಿಸದಿದ್ದರೆ, ನಿನ್ನೆಯಿಂದ ಪೊಲೀಸರ ವಶದಲ್ಲಿರುವ ಪ್ರಿಯಾಂಕಾ ಗಾಂಧಿಯವರನ್ನು ಬಿಡುಗಡೆ ಮಾಡದೇ ಇದ್ದರೆ , ಪಂಜಾಬ್ ಕಾಂಗ್ರೆಸ್ ಉತ್ತರಪ್ರದೇಶಧ ಲಖಿಂಪುರ ಜಿಲ್ಲೆಗೆ ಪಾದಯಾತ್ರೆ ನಡೆಸಲಿದೆ ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಮಂಗಳವಾರ ಸಂಜೆ ಉತ್ತರ ಪ್ರದೇಶ ಸರಕಾರಕ್ಕೆ ಎಚ್ಚರಿಕೆ ನೀಡಿದರು.
" ರೈತರ ಕ್ರೂರ ಹತ್ಯೆಯ ಹಿಂದಿರುವ ಕೇಂದ್ರ ಸಚಿವರ ಮಗನನ್ನು ನಾಳೆಯೊಳಗೆ ಬಂಧಿಸದಿದ್ದರೆ ಹಾಗೂ ಕಾನೂನುಬಾಹಿರವಾಗಿ ಬಂಧಿಸಲಾಗಿರುವ, ರೈತರಿಗಾಗಿ ಹೋರಾಡುತ್ತಿರುವ ನಮ್ಮ ನಾಯಕಿ ಪ್ರಿಯಾಂಕಾ ಗಾಂಧಿಯನ್ನು ಬಿಡುಗಡೆ ಮಾಡದಿದ್ದರೆ ಪಂಜಾಬ್ ಕಾಂಗ್ರೆಸ್ ಲಖಿಂಪುರ್ ಖೇರಿ ಕಡೆಗೆ ಪಾದಯಾತ್ರೆ ಹೊರಡುತ್ತದೆ''ಎಂದು 57 ವರ್ಷದ ಸಿಧು ಟ್ವೀಟ್ ಮಾಡಿದ್ದಾರೆ.
ಸೋಮವಾರ ಉತ್ತರ ಪ್ರದೇಶದ ಸೀತಾಪುರದಲ್ಲಿ ಲಖಿಂಪುರಕ್ಕೆ ಹೋಗುತ್ತಿದ್ದಾಗ "ಕಾನೂನುಬಾಹಿರವಾಗಿ" ನನ್ನನ್ನು ಬಂಧಿಸಲಾಯಿತು ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹೇಳಿದರು. ಲಖಿಂಪುರ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದರು.
ಹತ್ಯೆಯ ಕೇಸ್ ದಾಖಲಾಗಿದ್ದರೂ ಈ ತನಕ ಯಾರನ್ನೂ ಬಂಧಿಸಲಾಗಿಲ್ಲ. ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶೀಶ್ ಅನ್ನು ಮಾತ್ರ ಆರೋಪಿ ಎಂದು ಹೆಸರಿಸಲಾಗಿದೆ. ರೈತರ ಮೇಲೆ ಹರಿದಿರುವ ಕಾರನ್ನು ಆಶೀಶ್ ಚಲಾಯಿಸುತ್ತಿದ್ದ ಎಂದು ರೈತರು ಆರೋಪಿಸಿದ್ದಾರೆ. ನಾವಿಬ್ಬರೂ ಘಟನಾ ಸ್ಥಳದಲ್ಲಿ ಇರಲಿಲ್ಲ ಎಂದು ಸಚಿವರು ಹಾಗೂ ಅವರ ಮಗ ವಾದಿಸುತ್ತಿದ್ದಾರೆ.
If, by tomorrow, the Union Minister’s son behind the brutal murder of Farmers is not arrested, and our leader @PriyankaGandhi being unlawfully arrested, fighting for farmers is not released, the Punjab Congress will march towards Lakhimpur Kheri ! @INCIndia @INCPunjab
— Navjot Singh Sidhu (@sherryontopp) October 5, 2021