ಮಂಗಳೂರು; ದರೋಡೆ ಪ್ರಕರಣ: ನಾಲ್ಕು ಮಂದಿ ಆರೋಪಿಗಳ ಬಂಧನ

ಪೊಲೀಸ್ ಆಯುಕ್ತ ಎನ್. ಶಶಿಕುಮಾರ್
ಮಂಗಳೂರು, ಅ.5: ನಗರದ ಮಣ್ಣಗುಡ್ಡ ಆಶೀರ್ವಾದ್ ಪೆಟ್ರೋಲ್ ಬಂಕ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಭೋಜಪ್ಪ ಎಂಬವರನ್ನು ಸೆ. 28ರಂದು ಚಿಲಿಂಬಿ ಬಳಿ ತಡೆದು 4.20 ಲಕ್ಷ ರೂ. ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಓರ್ವ ಆರೋಪಿ ಪೆಟ್ರೋಲ್ ಬಂಕ್ನಲ್ಲೇ ಹಲವು ಸಮಯದಿಂದ ಕೆಲಸಕ್ಕಿದ್ದ ಶ್ಯಾಮ ಶಂಕರ್ ಎಂದು ಗುರುತಿಸಲಾಗಿದ್ದು, ಈತ ನಗರದ ಶಕ್ತಿನಗರದ ನಿವಾಸಿಯಾಗಿದ್ದಾನೆ. ಇತರ ಮೂವರನ್ನು ಕುಡುಪು ನಿವಾಸಿ ಅಭಿಷೇಕ್, ಶಕ್ತಿನಗರದ ಕಾರ್ತಿಕ್ ಹಾಗೂ ಸಾಗರ್ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳು 26ರಿಂದ 32 ವಯಸ್ಸಿನವರಾಗಿದ್ದು, ಬಂಧಿತರಿಂದ ದರೋಡೆಗೈದ ಹಣದಲ್ಲಿ 60,000 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.
ಪೆಟ್ರೋಲ್ ಪಂಪ್ನಲ್ಲಿ ಉದ್ಯೋಗಿಯಾಗಿದ್ದ ಶ್ಯಾಂ ಶಂಕರ್ಗೆ ಮ್ಯಾನೇಜರ್ ಆದ ಭೋಜಪ್ಪ ಅವರು ಪ್ರತಿದಿನ ಹಣವನ್ನು ಸಮೀಪದ ಬ್ಯಾಂಕ್ಗೆ ಕೊಂಡುಹೋಗುತ್ತಿದ್ದ ಬಗ್ಗೆ ಮಾಹಿತಿ ಇದ್ದು, ಅದರಂತೆ ತನ್ನ ಸ್ನೇಹಿತರನ್ನು ಒಟ್ಟುಗೂಡಿಸಿ ಈ ದರೋಡೆ ನಡೆಸಿದ್ದಾನೆ. ಅ. 28ರಂದು ಭೋಜಪ್ಪ ಅವರು ಹಣದೊಂದಿಗೆ ಚಿಲಿಂಬಿ ಬಳಿ ತೆರಳುತ್ತಿದ್ದಾಗ ಬ್ಯಾಂಕ್ನಿಂದ ಸ್ವಲ್ಪ ಹಿಂದೆ ಅವಿತಿದ್ದ ಇಬ್ಬರು ಆರೋಪಿಗಳು ಕ್ರಿಕೆಟ್ ಬ್ಯಾಟ್ನಿಂದ ಹಲ್ಲೆ ನಡೆಸಿ ಬ್ಯಾಗ್ ಕಸಿದು ಪರಾರಿಯಾಗಿದ್ದರು. ಹಣವನ್ನು ದರೋಡೆಗೈದ ಆರೋಪಿಗಳು ಅದರೊಂದಿಗೆ ಮುಂಬೈಗೆ ತೆರಳಿದ್ದು, ಸ್ವಲ್ಪ ಹಣವನ್ನು ಯಾರಿಗೋ ಕೊಟ್ಟಿರುವುದಾಗಿ, ಚಿನ್ನ ಮೊಬೈಲ್ ಖರೀದಿ ಜತೆಗೆ ಮತ್ತೆ ಸ್ವಲ್ಪ ಹಣ ಖರ್ಚು ಮಾಡಿರುವುದಾಗಿ ತನಿಖೆ ವೇಳೆ ತಿಳಿಸಿದ್ದಾರೆ. ಪ್ರಕರಣದಲ್ಲಿ ಇವರಿಗೆ ಹಣಕಾಸು, ವಾಹನ ನೆರವು ನೀಡಿದ ಇನ್ನೂ ಕೆಲ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ದರೋಡೆ ಸಂದರ್ಭ ಭೋಜಪ್ಪ ಎಂಬವರಿಗೆ ತಲೆ ಹಾಗೂ ಕಿವಿ ಭಾಗಕ್ಕೆ ಗಾಯಗಳಾಗಿವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಪ್ರಮುಖ ಆರೋಪಿ ಶ್ಯಾಂ ಶಂಕರ್ ಈ ಹಿಂದೆ ದರೋಡೆ ಪ್ರಕರಣವೊಂದರ ಆರೋಪಿಯಾಗಿದ್ದಾನೆ. ಇನ್ನೋರ್ವ ಆರೋಪಿ ಅಭಿಷೇಕ್ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಕೊಲೆ ಬೆದರಿಕೆ ಸೇರಿ ಹಲವು ಪ್ರಕರಣಗಳು ದಾಖಲಾಗಿವೆ. ಕಾರ್ತಿಕ್ ಎಂಬಾತನ ವಿರುದ್ಧವೂ ಈ ಹಿಂದೆ ಕೊಲೆ ಪ್ರಕರಣ, ಗಾಂಜಾ ಸೇವನೆ, ಹಲ್ಲೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಹಣ, ಆಭರಣಗಳ ಬಗ್ಗೆ ಇರಲಿ ಎಚ್ಚರಿಕೆ
ವ್ಯವಹಾರಕ್ಕಾಗಿ ಹಣ ವರ್ಗಾವಣೆ, ಓಡಾಡುವ ಸಂದರ್ಭ ಸಾರ್ವಜನಿಕರು ತನ್ನ ಆಭರಣಗಳ ಮುಂಜಾಗೃತಾ ಕ್ರಮಗಳನ್ನು ಅಗತ್ಯವಾಗಿ ವಹಿಸಬೇಕು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.
ನಿನ್ನೆ ಸುರತ್ಕಲ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಬ್ಬರು ನೀಡಿದ್ದಾರೆನ್ನುವ ಪ್ರಚೋದನಾಕಾರಿ ಭಾಷಣದ ವೀಡಿಯೋ ಕುರಿತಂತೆ ತಮಗೆ ಯಾವುದೇ ಅಧಿಕೃತ ದೂರು ಬಂದಿಲ್ಲ. ಆದರೆ ಈ ಬಗ್ಗೆ ಕಾನೂನು ಸಲಹೆ ಪಡೆದು ಕ್ರಮ ವಹಿಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಉತ್ತರಿಸಿದರು.
ಡಿಸಿಪಿ ದಿನೇಶ್ ಕುಮಾರ್ ಉಪಸ್ಥಿತರಿದ್ದರು.
ಸಾಮಾಜಿಕ ಜಾಲತಾಣಗಳ ಬಗ್ಗೆ ತಂಡದಿಂದ ನಿಗಾ
ಸಾಮಾಜಿಕ ತಾಣಗಳನ್ನು ಉಪಯೋಗಿಸಿಕೊಂಡು ಕೆಲವೊಂದು ಕೋಮು ಪ್ರಚೋದಕ ವೀಡಿಯೋ, ಆಡಿಯೋ ವೈರಲ್ ಆಗುತ್ತಿರುವ ಬಗ್ಗೆ ಇಲಾಖೆ ಗಮನ ಹರಿಸಿದ್ದು, ಈ ಬಗ್ಗೆ ವ್ಯವಸ್ಥಿತಾಗಿ ನಿಗಾ ಇರಿಸಲು ಸೈಬರ್ ಸೆಲ್ನ ತಂಡವೊಂದನ್ನು ಪೂರ್ಣ ಪ್ರಮಾಣದಲ್ಲಿ ಸಜ್ಜುಗೊಳಿಸಲಾಗಿದೆ. ತಂಡವು ಇಲಾಖೆಗೆ ಬರುವ ಅಥವಾ ಯಾವುದೇ ಗ್ರೂಪ್ಗಳಲ್ಲಿ ವೈರಲ್ ಆಗುವ, ಹರಿದಾಡುವ ಪ್ರಚೋದನಕಾರಿ ಬರಹ, ವೀಡಿಯೋ, ಆಡಿಯೋಗಳ ಬಗ್ಗೆ ಕಾನೂನು ಸಲಹೆಯನ್ನು ಪಡೆದು ಕ್ರಮ ವಹಿಸಲಿದೆ.
- ಎನ್. ಶಶಿಕುಮಾರ್, ಪೊಲೀಸ್ ಕಮಿಷನರ್, ಮಂಗಳೂರು.








