ಲಖಿಂಪುರ ಹಿಂಸಾಚಾರ:ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ದೀಪೇಂದರ್ ಸಿಂಗ್ ಹೂಡಾ ಸಹಿತ 10 ಜನರ ಬಂಧನ

ಲಕ್ನೋ,ಅ.5: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆಯ ವೇಳೆ ಭೀಕರ ಹಿಂಸಾಚಾರಕ್ಕೆ ಸಾಕ್ಷಿಯಾದ ಉತ್ತರಪ್ರದೇಶದ ಲಖೀಂಪುರ ಕೇರಿಗೆ ತೆರಳುತ್ತಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಪಕ್ಷದ ಉ.ಪ್ರ. ರಾಜ್ಯಾಧ್ಯಕ್ಷ ಅಜಯ್ ಕುಮಾರ್ ಲಲ್ಲೂ ಹಾಗೂ ಪಕ್ಷದ ಮುಖಂಡ ಅಜಯ್ ಕುಮಾರ್ ಲಲ್ಲೂ ಅವರನ್ನು ಶಾಂತಿ ಕದಡಿದ ಆರೋಪದಲ್ಲಿ ಮಂಗಳವಾರ ಬಂಧಿಸಲಾಗಿದ್ದು ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಲಖೀಂಪುರ ಕೇರಿಯಲ್ಲಿ ರವಿವಾರ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಕುಟುಂಬಗಳನ್ನು ಭೇಟಿಯಾಗಲು ತೆರಳುತ್ತಿದ್ದಪ್ರಿಯಾಂಕಾ ಅವರನ್ನು ಸೋಮವಾರ ಮುಂಜಾನೆಯ ವೇಳೆಗೆ ವಶಕ್ಕೆ ತೆಗೆದುಕೊಂಡಿದ್ದ ಪೊಲೀಸರು ಯಾವುದೇ ಆದೇಶ ಅಥವಾ ಎಫ್ಐಆರ್ ದಾಖಲಿಸದೆಯೇ ಸುಮಾರು 28 ತಾಸುಗಳ ಕಾಲ ಅತಿಥಿಗೃಹವೊಂದರಲ್ಲಿರಿಸಿದ್ದರು. ಇಂದು ಅವರನ್ನು ಅಧಿಕೃತವಾಗಿ ಬಂಧಿಸಲಾಗಿದ್ದು, ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆಯೆಂದು ಸೀತಾಪುರ ಜಿಲ್ಲಾ ಪೊಲೀಸ್ ಠಾಣಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರ ಸಚಿವ ಅಜಯ್ ಮಿಶ್ರಾ ಲಖೀಂಪುರ ಕೇರಿಗೆ ಆಗಮಿಸುತ್ತಿದ್ದಾಗ, ಅವರ ಬೆಂಗಾವಲು ವಾಹನವೊಂದು ರೈತರ ಮೇಲೆ ಹರಿದಿರುವುದಾಗಿ ಭಾರತೀಯ ಕಿಸಾನ್ ಯೂನಿಯನ್ ಆಪಾದಿಸಿದೆ. ಆ ಕಾರಿನಲ್ಲಿ ಅಜಯ್ ಮಿಶ್ರಾ ಅವರ ಪುತ್ರ ಆಶೀಷ್ ಮಿಶ್ರಾ ಇದ್ದರೆಂದು ಬಿಕೆಯು ಆಪಾದಿಸಿದೆ.
ಲಖೀಂಪುರ ಖೇರಿಯ ಹಿಂಸಾಚಾರದ ಘಟನೆಯ ಬಳಿಕ ಪ್ರಿಯಾಂಕಾ ಅವರು ಲಕ್ನೋದಿಂದ ಹೊರಹೋಗುವುದನ್ನು ಉತ್ತರಪ್ರದೇಶ ಸರಕಾರದ ನಿಷೇಧಿಸಿತ್ತು. ಆದರೆ ಪ್ರಿಯಾಂಕಾ ಅವರು ಕಾಲ್ನಡಿಗೆಯ ಮೂಲಕವೇ ನಡೆದುಕೊಂಡು ಹೋಗಿ ಕಾರನ್ನೇರಿದ್ದರು. ವಾರಂಟ್ ಇಲ್ಲದೆಯೇ ತನ್ನನ್ನು ವಶಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದುದಕ್ಕಾಗಿ ಪ್ರಿಯಾಂಕಾ ಅವರು ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ದೃಶ್ಯಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಈ ಮಧ್ಯೆ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಪ್ರಿಯಾಂಕಾ ವಾಧ್ರಾ ಅವರ ಬಂಧನವು ಕಾನೂನುಬಾಹಿರ ಹಾಗೂ ನಾಚಿಕೆಗೇಡಿನ ವಿಷಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘‘ ಪ್ರಿಯಾಂಕಾ ಅವರನ್ನು ಸೂರ್ಯೋದಯಕ್ಕೆ ಮೊದಲೇ 4:30ರ ವೇಳೆಗೆ ಪುರುಷ ಪೊಲೀಸ್ ಅಧಿಕಾರಿಯೊಬ್ಬರು ಬಂಧಿಸಿದ್ದಾರೆ. ಆದರೆ ಈವರೆಗೂ ಅವರನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರ ಮುಂದೆ ಹಾಜರುಪಡಿಸಲಾಗಿಲ್ಲ’’ ಎಂದು ಚಿದಂಬರಂ ಹೇಳಿದ್ದಾರೆ.
ಪ್ರಿಯಾಂಕಾ ಬಂಧನ ಖಂಡಿಸಿ, ಅವರನ್ನು ಬಂಧನದಲ್ಲಿರಿಸಲಾಗಿರುವ ಸೀತಾಂಪುರ ಅತಿಥಿಗೃಹದ ಮುಂದೆ ಹಾಗೂ ದೇಶದ ವಿವಿಧೆಡೆ ಕಾಂಗ್ರೆಸ್ ಬೆಂಬಲಿಗರು ತೀವ್ರ ಪ್ರತಿಭಟನೆ ನಡೆಸಿದರು. ಪ್ರಿಯಾಂಕಾ ಅವರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕೆಂದು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಆಗ್ರಹಿಸಿದ್ದಾರೆ.
‘‘ಭಾರತ ಸರಕಾರವು ಮೊದಲಿಗೆ ಕಾಂಗ್ರೆಸ್ ಅನು ದೂಷಿಸಲು ತನಗೆ ನಿಷ್ಠವಾಗಿರುವ ಮಾಧ್ಯಮಗಳನ್ನು ಬಳಸಿಕೊಂಡು, ದೇಶದಲ್ಲಿ ಸಮರ್ಥ ಪ್ರತಿಪಕ್ಷದ ಕೊರತೆಯಿದೆಯೆಂದು ಪ್ರಲಾಪಿಸುತ್ತದೆ. ಆದರೆ ಇದೇ ವೇಳೆ ಅಕ್ರಮವಾಗಿ ಬಂಧನಗಳನ್ನು ಮಾಡುವ ಮೂಲಕ ಪ್ರತಿಪಕ್ಷಗಳು ತಮ್ಮ ಕರ್ತವ್ಯವನ್ನು ನಿರ್ವಹಿಸದೆ ಇರುವಂತೆ ನೋಡಿಕೊಳ್ಳುತ್ತದೆ’’ ಎಂದು ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿದ್ದಾರೆ.
ಉತ್ತರಪ್ರದೇಶ ಸರಕಾರದ ದಮನನೀತಿಯ ವಿರುದ್ಧ ಪ್ರತಿಪಕ್ಷಗಳು ಜಂಟಿಯಾಗಿ ಕಾರ್ಯಾಚರಿಸಬೇಕೆಂದು ಶಿವಸೇನಾ ಎಂಪಿ ಸಂಜಯ್ ರಾವತ್ ಕರೆನೀಡಿದ್ದಾರೆ. ಚತ್ತೀಸ್ಗಢದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ರೂಪೇಶ್ ಬೇಲ್ ಅವರು ತಾನು ಲಕ್ನೋ ವಿಮಾನನನಿಲ್ದಾಣದಲ್ಲಿ ಧರಣಿ ನಡೆಸುತ್ತಿರುವ ಛಾಯಾಚಿತ್ರವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಲಖೀಂಪುರ ಖೇರಿಗೆ ತೆರಳಲಿದ್ದ ತನ್ನನ್ನು ಯಾವುದೇ ಆದೇಶವಿಲ್ಲದೆ ವಿಮಾನನಿಲ್ದಾಣದಲ್ಲಿ ತಡೆಯಲಾಗಿದೆ ಎಂದು ಅವರು ಹೇಳಿದ್ದಾರೆ.
‘‘ಲಖೀಂಪುರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಆದರೆ ನಾನು ಅಲ್ಲಿಗೆ ಹೋಗುತ್ತಿಲ್ಲ. ಹೀಗಿದ್ದರೂ ತನ್ನನ್ನು ವಿಮಾನನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ ’’ಎಂದವರು ಆಪಾದಿಸಿದ್ದರು ಆನಂತರ ಅಧಿಕಾರಿಯೊಬ್ಬರು ಅವರೊಂದಿಗೆ ಲಕ್ನೋದಲ್ಲಿ ಕೂಡಾ ಬೃಹತ್ ಸಭೆಗಳನ್ನು ನಿಷೇಧಿಸಲಾಗಿದೆ ಎಂದರು. ಬಳಿಕ ಬೇಲ್ ಅವರು ವಿಮಾನನಿಲ್ದಾಣ ನೆಲದಲ್ಲಿ ಕುಳಿತು ಧರಣಿ ನಡೆಸಿದರು.