2022ರ ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್ ನಿಂದ ಹಿಂದೆ ಸರಿದ ಹಾಕಿ ಇಂಡಿಯಾ

ಹೊಸದಿಲ್ಲಿ: ಮುಂದಿನ ವರ್ಷ ಬರ್ಮಿಂಗ್‌ಹ್ಯಾಮ್ ನಲ್ಲಿ ನಿಗದಿಯಾಗಿರುವ ಕಾಮನ್ವೆಲ್ತ್ ಗೇಮ್ಸ್ ನ ಹಾಕಿ ಸ್ಪರ್ಧೆಯಿಂದ ಭಾರತವು ಮಂಗಳವಾರ ಹಿಂದೆ ಸರಿದಿದೆ. ಕೋವಿಡ್-19 ಕಳವಳ ಹಾಗೂ ಭಾರತದಿಂದ ತೆರಳುವವರಿಗೆ ಇಂಗ್ಲೆಂಡ್ ನ ತಾರತಮ್ಯ ಕ್ವಾರಂಟೈನ್ ನಿಯಮಗಳನ್ನು ಮುಂದಿಟ್ಟುಕೊಂಡು ಹಾಕಿ ಇಂಡಿಯಾ ಈ ನಿರ್ಧಾರ ತೆಗೆದುಕೊಂಡಿದೆ. ಇಂಗ್ಲೆಂಡ್ ಇದೇ ರೀತಿಯ ಕಾರಣವನ್ನು ಮುಂದಿಟ್ಟುಕೊಂಡು ಭುವನೇಶ್ವರದಲ್ಲಿ ನಿಗದಿಯಾಗಿರುವ ಜೂನಿಯರ್ ಪುರುಷರ ಹಾಕಿ ವಿಶ್ವಕಪ್ ನಿಂದ ಹಿಂದೆ ಸರಿದ ಮರುದಿನ ಭಾರತ ಈ ನಿರ್ಧಾರ ಕೈಗೊಂಡಿದೆ.
ಹಾಕಿ ಇಂಡಿಯಾ ಅಧ್ಯಕ್ಷ ಜ್ಞಾನಂದ್ರೊ ನಿಂಗೊಂಬಮ್ ಅವರು ಫೆಡರೇಶನ್ ನಿರ್ಧಾರವನ್ನು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ (ಐಒಎ) ಅಧ್ಯಕ್ಷ ನರೇಂದರ್ ಬಾತ್ರಾ ಅವರಿಗೆ ಪತ್ರದಲ್ಲಿ ತಿಳಿಸಿದ್ದಾರೆ.
ಬರ್ಮಿಂಗ್ ಹ್ಯಾಮ್ ಗೇಮ್ಸ್ (ಜುಲೈ 28-ಆಗಸ್ಟ್ 8) ಹಾಗೂ ಹ್ಯಾಂಗ್ ಝೌ ಏಷ್ಯನ್ ಗೇಮ್ಸ್ (ಸೆಪ್ಟೆಂಬರ್ 10-25) ನಡುವೆ ಕೇವಲ 32 ದಿನಗಳ ವಿಂಡೋ ಲಭ್ಯವಿದೆ ಎಂದು ಹಾಕಿ ಇಂಡಿಯಾ ವಾದಿಸಿದೆ.
ಕೊರೋನ ವೈರಸ್ ನಿಂದ ತೀವ್ರವಾಗಿ ಬಾಧಿತವಾಗಿರುವ ಇಂಗ್ಲೆಂಡ್ ಗೆ ತನ್ನ ಆಟಗಾರರನ್ನು ಕಳುಹಿಸುವ ಅಪಾಯಕ್ಕೆ ಕೈಹಾಕುವುದಿಲ್ಲ ಎಂದು ಹಾಕಿ ಇಂಡಿಯಾ ತಿಳಿಸಿದೆ.







