ಗುಜರಾತ್ ಪೌರಸಂಸ್ಥೆಗಳ ಚುನಾವಣೆ: ಗಾಂಧಿನಗರ ಸೇರಿದಂತೆ ಮೂರು ಕ್ಷೇತ್ರಗಳನ್ನು ಗೆದ್ದ ಬಿಜೆಪಿ

ಅಹ್ಮದಾಬಾದ್, ಅ .5:ಗುಜರಾತಿನ ನಾಲ್ಕು ಪೌರಸಂಸ್ಥೆಗಳಿಗೆ ರವಿವಾರ ನಡೆದಿದ್ದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯು ಗಾಂಧಿನಗರ ಮಹಾನಗರ ಪಾಲಿಕೆ ಸೇರಿದಂತೆ ಮೂರರಲ್ಲಿ ಗೆಲುವು ಸಾಧಿಸಿದ್ದರೆ,ಕಾಂಗ್ರೆಸ್ ದೇವಭೂಮಿ-ದ್ವಾರಕಾ ಜಿಲ್ಲೆಯ ಭನ್ವಾಡ್ ನಗರಸಭೆಯನ್ನು ಬಿಜೆಪಿಯಿಂದ ಕಿತ್ತುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಇತ್ತೀಚಿಗೆ ಮುಖ್ಯಮಂತ್ರಿ ಮತ್ತು ಇಡೀ ಸಂಪುಟವನ್ನು ಬದಲಿಸಿದ್ದ ಬಿಜೆಪಿ ಪಾಲಿಗೆ ಗಾಂಧಿನಗರ ಮಹಾನಗರ ಪಾಲಿಕೆ ಚುನಾವಣೆಯನ್ನು ಸತ್ವಪರೀಕ್ಷೆ ಎಂದೇ ಪರಿಗಣಿಸಲಾಗಿತ್ತು. ಈ ವರ್ಷದ ಫೆಬ್ರವರಿಯಲ್ಲಿ ನಡೆದಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷವು ಭಾರೀ ಗೆಲುವು ಸಾಧಿಸಿತ್ತು.
ರಾಜ್ಯ ಚುನಾವಣಾ ಆಯೋಗವು ಪ್ರಕಟಿಸಿರುವ ಅಂತಿಮ ಫಲಿತಾಂಶದಂತೆ ಗಾಂಧಿನಗರ ಮಹಾಪಾಲಿಕೆಯ ಒಟ್ಟು 44 ಸ್ಥಾನಗಳ ಪೈಕಿ 41ನ್ನು ಬಿಜೆಪಿ ಗೆದ್ದಿದ್ದರೆ,ಕಾಂಗ್ರೆಸ್ಗೆ ಎರಡು ಸ್ಥಾನ ಮತ್ತು ಆಪ್ಗೆ ಒಂದು ಸ್ಥಾನ ಲಭಿಸಿವೆ.
ಫಲಿತಾಂಶ ಪ್ರಕಟಗೊಂಡ ಮೂರು ನಗರಸಭೆಗಳ ಪೈಕಿ ಥರಾ ಮತ್ತು ಓಖಾದಲ್ಲಿ ಬಿಜೆಪಿ ಗೆದ್ದಿದೆ. ಆದರೆ ಬಿಜೆಪಿ 1995ರಿಂದಲೂ ಅಧಿಕಾರದಲ್ಲಿದ್ದದ ಭನ್ವಾಡ ನಗರಸಭಾ ಫಲಿತಾಂಶ ಪಕ್ಷಕ್ಕೆ ಆಘಾತವನ್ನುಂಟು ಮಾಡಿದೆ. ಅಲ್ಲಿ 24ರ ಪೈಕಿ 16 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷವು ಬಿಜೆಪಿಯಿಂದ ಅಧಿಕಾರವನ್ನು ಕಿತ್ತುಕೊಂಡಿದೆ . ಅಲ್ಲಿ ಬಿಜೆಪಿಗೆ ಕೇವಲ ಎಂಟು ಸ್ಥಾನಗಳು ದಕ್ಕಿವೆ.ಮಾಡಿದೆ.ವಿವಿಧ ಸ್ಥಳೀಯ ಸಂಸ್ಥೆಗಳ 104 ಖಾಲಿ ಸ್ಥಾನಗಳಿಗೂ ರವಿವಾರ ಉಪಚುನಾವಣೆಗಳು ನಡೆದಿದ್ದವು.







