ವರ್ಗಾವಣೆ ಪತ್ರ ನೀಡದ ಖಾಸಗಿ ಶಾಲೆಗಳ ವಿರುದ್ದ ಪ್ರತಿಭಟನೆ

ಕುಂದಾಪುರ ಅ. 5: ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿದ್ದ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಲು, ಖಾಸಗಿ ಶಾಲೆಯವರು ವರ್ಗಾವಣೆ ಪತ್ರ(ಟಿಸಿ) ನೀಡದೆ ಸತಾಯಿಸುತ್ತಿರುವುದಾಗಿ ಆರೋಪಿಸಿ ಪೋಷಕರು ಮಂಗಳವಾರ ಕುಂದಾಪುರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕೊರೋನದಿಂದ ಬಸವಳಿದ ನಮಗೆ ಖಾಸಗಿ ಶಾಲೆಗಳ ಶುಲ್ಕ ಕಟ್ಟಲು ತೊಂದರೆಯಾಗಿದೆ. ಈ ಕಾರಣದಿಂದ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಲು ಮುಂದಾಗಿದ್ದೇವೆ. ಆದರೆ ಖಾಸಗಿ ಶಾಲೆಯವರು ಮಕ್ಕಳ ವರ್ಗಾ ವಣೆ ಪತ್ರ ನೀಡದೆ ಸತಾಯಿಸುತ್ತಿದ್ದಾರೆ ಎಂದು ಪೋಷಕರು ದೂರಿದರು.
ಶಾಲೆಯವರು ವರ್ಗಾವಣೆ ಪತ್ರ ನೀಡದಿದ್ದರೆ, ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕ್ಕಾರಿಗಳ ಕಚೇರಿಯಿಂದ ವರ್ಗಾವಣೆ ಪತ್ರ ಪಡೆದುಕೊಳ್ಳಬಹುದು ಎಂದು ಈಗಾಗಲೇ ಸರಕಾರ ಹೇಳಿದೆ. ಆದರೆ ತಮಗೆ ಎಲ್ಲಿಂದಲೂ ವರ್ಗಾ ವಣೆ ಪತ್ರ ಸಿಗುತ್ತಿಲ್ಲ. ಇದರಿಂದ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಲು ತೊಡಕಾಗಿದೆ. ಇದು ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ ಎಂದು ಅವರು ಆರೋಪಿಸಿದರು.
ಈ ಬಗ್ಗೆ ಪೋಷಕರು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಕೆ.ಪದ್ಮನಾಭ ಅವರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆಯನ್ವಯ ಮಗು ಇಷ್ಟಪಟ್ಟ ಶಾಲೆಯಲ್ಲಿ ಓದಬಹುದಾಗಿದೆ. ಮಗು ಖಾಸಗಿ ಶಾಲೆಯಿಂದ ಸರಕಾರಿ ಶಾಲೆಗೆ ಸೇರಬಯಸಿದರೆ, ಖಾಸಗಿ ಶಾಲೆಯವರು ಕಡ್ಡಾಯವಾಗಿ ಮಗುವಿಗೆ ವರ್ಗಾವಣೆ ಪತ್ರವನ್ನು ನೀಡಬೇಕು. ವರ್ಗಾವಣೆ ಪತ್ರ ನೀಡಲು ಸತಾಯಿಸುವ ಶಾಲೆಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು. ಈಗಾಗಲೇ ಮೇಲಧಿಕಾರಿಗಳಿಗೆ ಈ ಬಗ್ಗೆ ಪತ್ರ ಬರೆಯಲಾಗಿದೆ. ಖಾಸಗಿ ಶಾಲೆಯವರಿಗೆ ನೋಟೀಸು ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪೋಷಕರಾದ ಸತೀಶ್ ಖಾರ್ವಿ, ರಮೇಶ್ ಮೆಂಡನ್, ಅನಿಲ್ ಕುಮಾರ್, ಅಜಿತ್ ಜೋಗಿ, ಮಹೇಶ್ ಸುವರ್ಣ, ರತಿ ರಾಜೇಶ್, ಉಮೇಶ್ ಆಚಾರ್, ಸುಧಾಕರ್ ಮೊದಲಾದವರು ಉಪಸ್ಥಿತರಿದ್ದರು.







