ಹಾಲು ಉತ್ಪಾದಕರ ಬಾಕಿ ಹಣ ನೀಡಲು ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಒತ್ತಾಯ
ಉಡುಪಿ, ಅ.5: ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಾವಿರಾರು ಮಂದಿ ಹೈನುಗಾರಿಕೆಯನ್ನು ಜೀವನಾಧಾರವಾಗಿ ಅವಲಂಬಿಸಿಕೊಂಡಿರುವುದರಿಂದ ಕಳೆದ ಹಲವಾರು ತಿಂಗಳಿನಿಂದ ಸರಕಾರ ಬಾಕಿ ಇರಿಸಿದ ಹಾಲಿನ ಸಹಾಯಧನ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಸರಕಾರವನ್ನು ಆಗ್ರಹಿಸಿದೆ.
ಈಗಿನ ಬಿಜೆಪಿ ಸರಕಾರ ಪಶು ಆಹಾರದ ಬೆಲೆಯನ್ನು ದಿನದಿಂದ ದಿನಕ್ಕೆ ಏರಿಸುತ್ತಿದ್ದು ಹಾಲಿನ ದರವನ್ನು ಕಡಿಮೆ ಮಾಡುತ್ತಿದೆ. ಇದರಿಂದ ರೈತರಿಗೆ ಆದಾಯದಲ್ಲಿ ಬಹಳ ತೊಂದರೆಯಾಗುತ್ತಿದೆ. 800 ರೂ.ಗೆ ಸಿಗುತ್ತಿದ್ದ ಪಶು ಆಹಾರ ಈಗ 1,100ರೂ. ಆಗಿದೆ. ಆದರೆ ಹಾಲಿನ ದರ ಮಾತ್ರ ಯಥಾಸ್ಥಿತಿ ಇದೆ ಎಂದು ಕಿಸಾನ್ ಕಾಂಗ್ರೆಸ್ ಹೇಳಿಕೆಯಲ್ಲಿ ತಿಳಿಸಿದೆ.
ಅಲ್ಲದೇ ಹಾಲಿಗೆ ಸರಕಾರ ಕೊಡುವ ಸಹಾಯಧನ ಕೂಡ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಇದರಿಂದಾಗಿ ಹಾಲು ಉತ್ಪಾದಿಸುವ ರೈತರಿಗೆ ತುಂಬಾ ತೊಂದರೆಯಾಗಿದೆ. ಆದ್ದರಿಂದ ಪಶುಸಂಗೋಪನಾ ಇಲಾಖೆಯು ಕೂಡಲೇ ಈ ಬಗ್ಗೆ ಎಚ್ಚತ್ತುಕೊಂಡು ಹಾಲು ಉತ್ಪಾದಿಸುವ ರೈತರ ಸಹಾಯಧನವನ್ನು ಸಕಾಲದಲ್ಲಿ ಬಿಡುಗಡೆ ಮಾಡಬೇಕೆಂದು ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಎಲ್ಲೂರು ಶಶಿಧರ ಶೆಟ್ಟಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.





