ರೈತರ ಮೇಲೆ ಚಲಾಯಿಸಿರುವ ಕಾರು ನನ್ನದೇ: ಕೇಂದ್ರ ಸಚಿವ ಅಜಯ್ ಮಿಶ್ರಾ
'ಘಟನೆ ನಡೆದಾಗ ತಾನಾಗಲಿ ಅಥವಾ ತನ್ನ ಮಗನಾಗಲಿ ಸ್ಥಳದಲ್ಲಿ ಇರಲಿಲ್ಲ'

ಹೊಸದಿಲ್ಲಿ: ಉತ್ತರಪ್ರದೇಶದಲ್ಲಿ ಎಂಟು ಜನರನ್ನು ಬಲಿ ಪಡೆದ ಭೀಕರ ಹಿಂಸಾಚಾರ ಘಟನೆಯ ವೇಳೆ ಪ್ರತಿಭಟನಾನಿರತ ರೈತರ ಮೇಲೆ ಚಲಾಯಿಸಲಾಗಿರುವ ಕಾರು ತನಗೆ ಸೇರಿದ್ದಾಗಿದೆ ಎಂದು ಒಪ್ಪಿಕೊಂಡಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ, ತನ್ನ ಮಗ ಈ ಕೃತ್ಯದಲ್ಲಿ ಭಾಗಿಯಾಗಿಲ್ಲ. ಘಟನೆ ನಡೆದಾಗ ತಾನಾಗಲಿ ಅಥವಾ ತನ್ನ ಮಗನಾಗಲಿ ಸ್ಥಳದಲ್ಲಿ ಇರಲಿಲ್ಲ ಎಂದು NDTV ಗೆ ತಿಳಿಸಿದ್ದಾರೆ.
"ಮೊದಲ ದಿನದಿಂದಲೇ ಕಾರು ನಮ್ಮದೇ. ಅದು ನಮ್ಮ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ ಎಂದು ನಾವು ಸ್ಪಷ್ಟಪಡಿಸಿದ್ದೇವೆ ಹಾಗೂ ನಮ್ಮ ಕೆಲಸಗಾರರನ್ನು ಕರೆದುಕೊಂಡು ಹೋದ ನಂತರ ವಾಹನವು ಬೇರೆಯವರನ್ನು ಕರೆತರಲು ಹೋಗಿತ್ತು. ನನ್ನ ಮಗ ಇನ್ನೊಂದು ಸ್ಥಳದಲ್ಲಿದ್ದ. ಬೆಳಿಗ್ಗೆ 11 ರಿಂದ ಸಂಜೆಯವರೆಗೆ ಆತ ಇನ್ನೊಂದು ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದ. ನನ್ನ ಮಗ ಅಲ್ಲಿದ್ದ ಎನ್ನುವುದಕ್ಕೆ ಫೋಟೊಗಳು ಹಾಗೂ ವೀಡಿಯೊಗಳಿವೆ. ಕಾಲ್ ರೆಕಾರ್ಡ್, ಸಿಡಿಆರ್, ಲೊಕೇಶನ್ ಅನ್ನು ನೀವು ಪರಿಶೀಲಿಸಬಹುದು. ಅಲ್ಲಿ ಸಾವಿರಾರು ಜನರಿದ್ದರು. ಅವರೇ ಇದಕ್ಕೆ ಸಾಕ್ಷಿ'' ಎಂದು ಅಜಯ್ ಮಿಶ್ರಾ NDTVಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.





