ಕುಂದಾಪುರ: ಭಾರೀ ಸುಂಟರಗಾಳಿಗೆ ಅಂಪಾರು ಗ್ರಾಮ ತತ್ತರ
35 ಮನೆಗಳಿಗೆ ಹಾನಿ, ಧರೆಗೆ ಉರುಳಿದ ಮರಗಳು, ವಿದ್ಯುತ್ ಕಂಬಗಳು

ಕುಂದಾಪುರ, ಅ.5: ವಂಡ್ಸೆ ಹೋಬಳಿ ಅಂಪಾರು ಗ್ರಾಮದ ಮೂಡುಬಗೆ ಎಂಬಲ್ಲಿ ಇಂದು ಸಂಜೆ ಅನಿರೀಕ್ಷಿತವಾಗಿ ಬೀಸಿದ ಭಾರೀ ಸುಂಟರಗಾಳಿಗೆ ಇಡೀ ಗ್ರಾಮವೇ ತತ್ತರಿಸಿ ಹೋಗಿದ್ದು, ಹಲವು ಮನೆಗಳು, ತೋಟಗಳಿಗೆ ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
ಮೂಡುಬಗೆಯ ಪರಿಸರಕ್ಕೆ ಸುಂಟರಗಾಳಿ ಅಪ್ಪಳಿಸಿದ ಪರಿಣಾಮ ಹಲವು ಬೃಹತ್ ಮರಗಳು ಬುಡ ಸಮೇತವಾಗಿ ನೆಲಕ್ಕೆ ಉರುಳಿವೆ. ಹಲವು ಮರಗಳು ರಸ್ತೆಗೆ ಬಿದ್ದ ಪರಿಣಾಮ ಸಂಚಾರ ವ್ಯತ್ಯಯ ಉಂಟಾಗಿದೆ. ಬಳಿಕ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಂಜೆಯೊಳಗೆ ಮರಗಳನ್ನು ತೆರವುಗೊಳಿಸುವ ಕಾರ್ಯ ನಡೆಸಿದರು.
ಇದರಿಂದ ಸುಮಾರು 35 ವಾಸ್ತವ್ಯದ ಮನೆಗಳಿಗೆ ಹಾನಿಯಾಗಿವೆ. 25 ಕುಟುಂಬಗಳ ಅಡಿಕೆ ತೋಟ ತೆಂಗಿನತೋಟ ಬಾಳೆ ತೋಟಗಳಿಗೆ ಹಾನಿ ಯಾಗಿದೆ. ಅಡಿಕೆ ಮರಗಳು ಸೀಲು ಆಗಿ ಮುರಿದು ಬಿದ್ದಿವೆ. ತೆಂಗಿನ ಮರಗಳು ಧರೆಗೆ ಉರುಳಿವೆ. ಬಹಳಷ್ಟು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಮೆಸ್ಕಾಂಗೆ 30 ಲಕ್ಷ ರೂ.ವರೆಗೆ ನಷ್ಟ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.
ಇಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿ ದ್ದಾರೆ. ಸ್ಥಳಕ್ಕೆ ಕುಂದಾಪುರ ತಹಶೀಲ್ದಾರ್ ಕಿರಣ್ ಗೊರಯ್ಯ, ಕಂದಾಯ ನಿರೀಕ್ಷಕ ರಾಘವೇಂದ್ರ ಡಿ., ಅಂಪಾರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಧು ಸೂದನ್, ಗ್ರಾಪಂ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅದೇ ರೀತಿ ಉಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ಬೀಸಿದ ಭಾರೀ ಗಾಳಿಯಿಂದ ನಾಲ್ಕು ಕುಟುಂಬಗಳ ಅಡಿಕೆ ತೋಟಗಳಿಗೆ ಹಾನಿ ಉಂಟಾಗಿದೆ ಎಂದು ತಿಳಿದು ಬಂದಿದೆ. ಜಿಲ್ಲೆಯಾದ್ಯಂತ ಸಂಜೆ ವೇಳೆ ಗುಡುಗು ಸಹಿತ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.










